ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಬ್ಬಿರುವ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಲಿಸರು ಕಠಿಣಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ‘ರಾತ್ರಿ 9.30ಕ್ಕೆ ಭರತ್ ಕುಮೇಲ್ ಕೊಲ್ಲುತ್ತೇವೆ’ ಎಂಬ ಸಂದೇಶ ರವಾಣೆಯಾದ ಹಿನ್ನಲೆಯಲ್ಲಿ ಮಂಗಳೂರು ನಗರದಾದ್ಯಂತ ಪೋಲಿಸರು ಹೈ ಅಲರ್ಟ್ ಆಗಿದ್ದಾರೆ. ಸೋಮವಾರ ರಾತ್ರಿ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ.
ಜನರನ್ನು ಬೇಗನೆ ಮನೆ ಸೇರಿಸುವ ಯತ್ನದಲ್ಲಿ ಹೋಟೆಲ್, ಪಬ್, ಬಾರ್ಗಗಳು, ಫುಟ್ ಪಾತ್ ವ್ಯಾಪಾರವನ್ನು ರಾತ್ರಿ 9.30 ರ ಒಳಗೆ ಬಂದ್ ಮಾಡಿಸುವ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.
ಸುಹಾಸ್ ಶೆಟ್ಟಿ ಕೊಲೆ ನಂತರ ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ನಡೆದಿದ್ದು, ಒಟ್ಟಾರೆಯಾಗಿ 7 ಮಂದಿಯನ್ನು ಬಂಧಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಮಂಗಳೂರಿನಲ್ಲಿ ಮತ್ತಿಬ್ಬರು ಹಿಂದೂ ಮುಖಂಡರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಹಾಕಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‍ವೇಲ್ ಮತ್ತು ಭರತ್ ಕುಮೇಲ್ ಅವರನ್ನು ಹತ್ಯೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು.
“ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ” ಎಂದು ಭರತ್ ಕುಮೇಲ್ ಹೆಸರು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದರು. ಹೀಗಾಗಿ, ಸೋಮವಾರವೇ ಮಂಗಳೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಫುಟ್ಬಾತ್ ವ್ಯಾಪಾರಿಗಳನ್ನು ರಾತ್ರಿ 9:30ರ ಒಳಗೆ ತೆರವುಗೊಳಿಸುವ ಪ್ರಕ್ರಿಯೆ ಶುರುವಾಗಿತ್ತು.
 
				 
         
         
         
															 
                     
                     
                     
                     
                    


































 
    
    
        