ಮುಂಬೈ: ಏಪ್ರಿಲ್ 22ರಂದು ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು.
ಇದೀಗ ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್ ಆರಂಭಿಸಿವೆ. ಇದು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯಾಗಿದೆ. ಉಭಯ ದೇಶಗಳ ನಡುವಣ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೂ ಕಾರ್ಮೋಡ ಆವರಿಸಿದೆ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾದರೆ, ಐಪಿಎಲ್ಗೆ ಬ್ರೇಕ್ ಬೀಳಲಿದೆ. ಈಗಾಗಲೇ ಬಿಸಿಸಿಐ ಮತ್ತು ಐಪಿಎಲ್ ವ್ಯವಸ್ಥಾಪಕರು ಈ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ವ್ಯವಸ್ಥಾಪಕರು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಕೇಂದ್ರ ಸರ್ಕಾರ ಸೂಚನೆ ನೀಡಿದರೆ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಿದ್ದಾರೆ. ಇದನ್ನೂ ಓದಿ: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ! ಈಡನ್‌ನಲ್ಲಿ ಧೋನಿಗೆ ಕೊನೆಯ ಪಂದ್ಯ? ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಾಗಿದ್ದು, ಹೀಗಾಗಿ ಐಪಿಎಲ್‌ನ ಉಳಿದ ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ನಿಲ್ಲಿಸಲಾಗುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಅಥವಾ ಇಂಡಿಯನ್ ಆರ್ಮಿ ಸೂಚನೆ ನೀಡಿದರೆ ಮಾತ್ರ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.