ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಲ್ಲಿನ ಇಂಡಸ್ಟ್ರಿಯಲ್ ಫೋರ್ಸ್ ಅನ್ನು ನಿಯೋಜನೆ ಮಾಡಲಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗಕ್ಕೂ ಭದ್ರತೆ ಹೆಚ್ಚಿಸಿದ್ದೇವೆ. ಹೊರಭಾಗದಲ್ಲಿ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಸ್ರೋ, ಡಿಆರ್ಡಿಒ, ಹೆಚ್ಎಎಲ್, ರಕ್ಷಣಾ ಇಲಾಖೆ ಭದ್ರತೆ:
ಬೆಂಗಳೂರಿನಲ್ಲಿರುವ ಇಸ್ರೋ, ಡಿಆರ್ಡಿಒ, ಹೆಚ್ಎಎಲ್ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸದ ಸ್ಥಳಗಳಲ್ಲೆ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಈ ಸ್ಥಳಗಳಲ್ಲಿನ ಭದ್ರತೆಯನ್ನು ಕೇಂದ್ರ ಸರ್ಕಾರ ನೇರವಾಗಿ ನಿರ್ವಹಣೆ ಮಾಡುತ್ತದೆ. ಪಹೆಲ್ಗಾಮ್ ದಾಳಿ ನಂತರ ಸಹಜವಾಗಿ ಭದ್ರತೆಯನ್ನು ಹೆಚ್ಚಿಸಿದೆ. ಇಂತಹ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಕರಾವಳಿಯಲ್ಲಿ ಕಟ್ಟೆಚ್ಚರ
ಜಮ್ಮು ಕಾಶ್ಮೀರ ಪಹೆಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಾವಲು ಪಡೆ ಪೊಲೀಸರು ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಮಂಗಳೂರಿನ ಬಂದರು ತೀರದಲ್ಲಿ ಪರಿಶೀಲನೆ ನಡೆಸಿದಿದ್ದಾರೆ. ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್, ಮೀನುಗಾರರನ್ನು ತಪಾಸಣೆಗೆ ಒಳಪಡಿಸಿದ್ದಾರೆ.