ಮಂಗಳೂರು/ಉಡುಪಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ’ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ 324 ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ, ಹೆಜಮಾಡಿ, ಹೊನ್ನಾವರ, ಬೇಲೆಕೇರಿ ಮತ್ತು ಗಂಗೊಳ್ಳಿಯಲ್ಲಿ ಸಿಎಸ್‌ಪಿ ಕೇಂದ್ರಗಳು ಸೇರಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 340 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅದರಲ್ಲಿ 180 ಸಿಬ್ಬಂದಿಯನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು 24/7 ಕಣ್ಗಾವಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಭದ್ರತಾ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
“ಪಹಲ್ಗಾಮ್ ಘಟನೆಯ ನಂತರ, ನಮ್ಮ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆಯಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಂದು ಕಾರವಾರದಲ್ಲಿ ಅಣಕು ನಾಗರಿಕ ರಕ್ಷಣಾ ಕವಾಯತು ನಡೆಸಲಾಯಿತು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ ದೋಣಿಗಳನ್ನು ಸಾಮಾನ್ಯ ದಿನಗಳಿಗಿಂತ ಹೆಚ್ಚು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಮೇ 7 ರಂದು, ಸಿಎಸ್‌ಪಿ ಗಸ್ತು ದೋಣಿಗಳು ಮಂಗಳೂರಿನ ಹಳೆಯ ಬಂದರು ಪ್ರದೇಶದಲ್ಲಿ ಕಣ್ಗಾವಲು ನಡೆಸಿದವು. ಇದರ ಜೊತೆಗೆ, ಸುತ್ತಮುತ್ತಲಿನ ದೋಣಿಗಳನ್ನು ಪರಿಶೀಲಿಸಲು ಅಣಕು ಕಾರ್ಯಾಚರಣೆಯನ್ನು ಸಹ ನಡೆಸಲಾಯಿತು. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಕರಾವಳಿ ಭದ್ರತಾ ಪೊಲೀಸರು, ಕರಾವಳಿ ಮತ್ತು ಆಳ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಕರಾವಳಿ ಕಾವಲು ಪಡೆ ಹಡಗುಗಳು ಈಗಾಗಲೇ 24×7 ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ವಿದೇಶಿ ಹಡಗುಗಳ ಮೇಲೆ ಹೆಚ್ಚಿನ ಕಣ್ಗಾವಲು ನಡೆಸುತ್ತಿವೆ.
ಲಭ್ಯವಿರುವ ದೋಣಿಗಳ ಸಮೂಹವನ್ನು ಬಳಸಿಕೊಂಡು ನಿರಂತರ ಗಸ್ತು ನಡೆಸಲಾಗುತ್ತಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದರು. ಇಂದು ಮಲ್ಪೆಯಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು. ಇತರ ಜಿಲ್ಲೆಗಳಿಂದ ಬರುವ ದೋಣಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ದೋಣಿಗಳಿಗೆ ದಂಡ ವಿಧಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡುಬಂದ ಯಾರನ್ನಾದರೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.