ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಚಂಡೀಗಢ ಸರ್ಕಾರ 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಅಡಿಯಲ್ಲಿ ಭಾರತೀಯ ಸೇನೆ ಪಾಕ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತ 2ನೇ ಬಾರಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಭಾರತ ಹಾಗೂ ಪಾಕ್ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ ಹಿನ್ನೆಲೆ ಇದೀಗ ಚಂಡೀಗಢ ಸರ್ಕಾರ ಎರಡು ತಿಂಗಳುಗಳ ಕಾಲ ಮದುವೆ, ಶುಭ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇದರೊಂದಿಗೆ ರಾಜಸ್ಥಾನದ ಜೈಸಲ್ಮೇರ್ನಲ್ಲಿಯೂ ಪಟಾಕಿ ಸಿಡಿಸುವುದರ ಜೊತೆಗೆ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿಲಾಗಿದೆ.
2023ರ ಬಿಎನ್ಎಸ್ ಸೆಕ್ಷನ್ 163ರ ಅಡಿಯಲ್ಲಿ 2025ರ ಮೇ 09 ರಿಂದ ಜುಲೈ 7ರವರೆಗೆ ಪಟಾಕಿ ನಿಷೇಧಿಸಲಾಗಿದೆ. ಮದುವೆ, ಶುಭ ಸಮಾರಂಭ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಕಾರಣ ಯುದ್ಧ ಭೀತಿಯ ಸಂದರ್ಭದಲ್ಲಿ ಈ ರೀತಿ ಪಟಾಕಿ ಶಬ್ದವು ಡ್ರೋನ್ ಹಾಗೂ ಕ್ಷಿಪಣೆ ದಾಳಿಯ ಭ್ರಮೆಯನ್ನು ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತದೆ. ಹೀಗಾಗಿ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ತಿಳಿಸಿದ್ದಾರೆ.