ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಹುತೇಕ ಪೂರ್ಣ ಪ್ರಮಾಣದ ಯುದ್ಧ ಹಾಗೂ ಪರಮಾಣು ಅಸ್ತ್ರ ಬಳಕೆ ಸಾಧ್ಯತೆಯನ್ನು ರೂಟ್ಲೆಡ್ಜ್ ಸಂಸ್ಥೆ 2019ರಲ್ಲೇ ವರದಿ ಮಾಡಿದೆ.
ರೂಟ್ಲೆಡ್ಜ್ ಎನ್ನುವ ಬ್ರಿಟಿಷ್ ಪುಸ್ತಕ ಮುದ್ರಣ ಸಂಸ್ಥೆ 2019ರಲ್ಲಿ ಪ್ರಕಟಿಸಿದ ಒಂದು ಸಂಶೋಧನಾ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಸಾಧ್ಯತೆ ಬಗ್ಗೆ ಬರೆದಿದೆ. ಯುದ್ಧ ಹೇಗೆ ಶುರುವಾಗಬಹುದು, ಹೇಗೆ ವಿಕೋಪಕ್ಕೆ ತಿರುಗಬಹುದು ಎನ್ನುವ ಸಂಗತಿಯನ್ನು ಈ ಅಧ್ಯಯನದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. 2025ರಲ್ಲಿ ಭಾರತದೊಳಗೆ ದೊಡ್ಡ ಮಟ್ಟದ ಉಗ್ರ ದಾಳಿ ಸಂಭವಿಸುತ್ತದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಕ್ಕೆ ಕಿಡಿ ಹೊತ್ತಿಕೊಳ್ಳುತ್ತದೆ ಎಂದು 2019ರಲ್ಲೇ ಈ ಸಂಶೋಧನಾ ವರದಿ ಹೇಳಿತ್ತು.
ಪರಮಾಣು ಬಾಂಬ್ ದಾಳಿ ಸಾಧ್ಯತೆ: ಉಗ್ರ ದಾಳಿ ಬಳಿಕ ಗಡಿ ಭಾಗದಲ್ಲಿ ಎರಡೂ ಕಡೆಯ ಸೈನಿಕ ತುಕಡಿಗಳ ನಿಯೋಜನೆಯಾಗುತ್ತದೆ. ಪಾಕಿಸ್ತಾನದ ಪಡೆಗಳು ಪಾಕಿಸ್ತಾನ ಭೂಭಾಗದೊಳಗೆ ಪ್ರವೇಶ ಮಾಡುತ್ತವೆ. ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದೆದುರು ಸೋಲುವ ಭೀತಿ ಪಾಕಿಸ್ತಾನಕ್ಕೆ ಬರಬಹುದು. ಪರಿಣಾಮವಾಗಿ 10 ಪರಮಾಣು ಅಸ್ತ್ರಗಳನ್ನು ಭಾರತೀಯ ಟ್ಯಾಂಕ್‌ಗಳ ಮೇಲೆ ಬಳಸಬಹುದು. ಭಾರತವೂ ಪಾಕಿಸ್ತಾನದ ಗಡಿಯಲ್ಲಿ ಅಣ್ವಸ್ತ್ರಗಳನ್ನು ಸಿಡಿಸಬಹುದು. ಒಂದೊಂದು ಅಸ್ತ್ರವೂ 5 ಕಿಲೋ ಟನ್‌ನಷ್ಟು ಪ್ರಬಲವಾಗಿರುತ್ತದೆ. ಪಾಕಿಸ್ತಾನವು ಇನ್ನೂ 15 ಪರಮಾಣು ಬಾಂಬ್ ಹಾಕಬಹುದು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಸೇನಾ ನೆಲೆ ಮತ್ತು ಪರಮಾಣು ಘಟಕಗಳನ್ನು ಗುರಿಯಾಗಿಸಿ 20 ಪರಮಾಣು ಬಾಂಬ್ ಹಾಕಬಹುದು.
1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಭೂಕಂಪ ವೇಳೆ ಸಂಭವಿಸಿದ ಅಗ್ನಿ ಅವಘಡ ಮತ್ತು ಹಿರೋಶಿಮಾದಲ್ಲಿ ಬಿದ್ದ ಬಾಂಬ್ ರೀತಿಯಲ್ಲಿ ಭಯಾನಕ ಅನುಭವವಾಗುತ್ತದಂತೆ. ಆದರೆ, ಇದು ಇಲ್ಲಿಗೇ ನಿಲ್ಲುವುದಿಲ್ಲ. ಭಾರತವು ಸಂಘರ್ಷ ಮುಂದುವರಿಸುತ್ತದೆ ಎಂದು 2019ರ ರೂಟ್ಲೆಡ್ಜ್ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ನಿಯಂತ್ರಣ ತಪ್ಪಲಿದ್ಯಾ? ಅಣ್ವಸ್ತ್ರ ಬಳಕೆಯ ಮೂರನೇ ದಿನ ಪಾಕಿಸ್ತಾನವು ಭಾರತದ ನೌಕಾ ನೆಲೆ ಮತ್ತು ನಗರ ವಾಯುನೆಲೆಗಳ ಮೇಲೆ 45 ಅಣ್ವಸ್ತ್ರ ಬಾಂಬ್ ಹಾಕಬಹುದು. ಇದಕ್ಕೆ ಪ್ರತಿಯಾಗಿ ಭಾರತವೂ 10 ಬಾಂಬ್ ಹಾಕುತ್ತದೆ.
ಮುಂದಿನ ಮೂರು ದಿನದಲ್ಲಿ ಪಾಕಿಸ್ತಾನವು ಭಾರತೀಯ ನಗರಗಳನ್ನು ಗುರಿಯಾಗಿಸಿ ತನ್ನೆಲ್ಲಾ 120 ಅಣ್ವಸ್ತ್ರಗಳನ್ನು ಹಾರಿಸಬಹುದು. ಭಾರತವು 70 ಅಣ್ವಸ್ತ್ರ ಪ್ರಯೋಗಿಸಬಹುದು. ತನ್ನಲ್ಲಿ ಉಳಿದಿರುವ 100 ಅಸ್ತ್ರಗಳನ್ನು ಚೀನಾಗೆಂದು ಮೀಸಲಿರಿಸಿಕೊಂಡಿರುತ್ತದೆ ಎಂದು ವರದಿ ಹೇಳಿದೆ. 5ರಿಂದ 12 ಕೋಟಿ ಜನ ಸಾವು: ರೂಟ್ಲೆಡ್ಜ್ ವರದಿಯ ಪ್ರಕಾರ, ಅಣ್ವಸ್ತ್ರಗಳು ಬಳಕೆಯಾದರೆ 5ರಿಂದ 12 ಕೋಟಿ ಜನರು ಕೂಡಲೇ ಸಾಯಬಹುದು. ಎರಡೂ ದೇಶಗಳ ಪ್ರಮುಖ ನಗರಗಳೆಲ್ಲವೂ ಸಂಪೂರ್ಣ ನಿರ್ನಾಮವಾಗಬಹುದು. ಇದರ ಪರಿಣಾಮ ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಜಗತ್ತಿನಾದ್ಯಂತ ಪರಿಸರಕ್ಕೆ ಹಾನಿಯಾಗುತ್ತದೆ. ಹಲವೆಡೆ ಬರ ಪರಿಸ್ಥಿತಿ ಉದ್ಭವಿಸಬಹುದು. ನೂರಾರು ಕೋಟಿ ಜನರಿಗೆ ಸಾವು ಬದುಕಿನ ಪ್ರಶ್ನೆ ಉದ್ಭವಿಸಬಹುದು ಎಂದು ಈ ರಿಸರ್ಚ್ ಸ್ಟಡಿಯಲ್ಲಿ ಅಂದಾಜಿಸಲಾಗಿದೆ.