ಬೆಂಗಳೂರು: ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶವಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಮೂರನೇ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ. ಪಾಕ್ ಹಾಗೂ ನಮ್ಮ ನಡುವಿನ ಎಲ್ಲಾ ವಿಚಾರವನ್ನು ನಿಭಾಯಿಸುವ ಶಕ್ತಿಯಿದೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಪಾಕಿಸ್ತಾನದವರು ಏನೇ ಉಪಟಳ ಮಾಡಿದ್ರೂ ಅವರಿಗೆ ಅಂತಿಮವಾಗಿ ದೊಡ್ಡಮಟ್ಟದ ಹೊಡೆತ ಬೀಳಲಿದೆ ಎಂದು ಹೇಳಿದರು.
ಕಳೆದ ಒಂದು ವಾರದಿಂದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಕೃತ್ಯ ದೇಶಾದ್ಯಂತ ಚರ್ಚೆಯಾಯ್ತು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವರು ಹಲವು ಸಭೆಗಳನ್ನು ಮಾಡಿ ಉಗ್ರ ಚಟುವಟಿಕೆ ಅಂತಿಮ ಇತೀಶ್ರೀ ಹಾಡಬೇಕು ಎಂದು ಹೆಜ್ಜೆಯಿಟ್ಟರು. ನಮ್ಮ ದೇಶದ ಗೌರವ ಹಾಳಾಗಬಾರದೆಂದು ಪ್ರಧಾನಿಯವರು ಹಾಗೂ ಅಧಿಕಾರಿಗಳು ಕದನವಿರಾಮದ ನಿರ್ಧಾರ ತೆಗೆದುಕೊಂಡರು ಎಂದರು.
ಭಾರತೀಯ ಸೇನೆಯು ಕೇವಲ ಪಾಕ್ನ ಉಗ್ರ ನೆಲಗಳ ಮೇಲೆ ಮಾತ್ರ ದಾಳಿ ಮಾಡಿದೆ. ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಪಾಕ್ ಶರಣಾಗತಿಯಾಯ್ತು. ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ, ನಮ್ಮ ದಾಳಿಯಿಂದ ಪಾಕ್ಗೆ ಮುಖಭಂಗವಾಗಿದೆ. ಭಾರತ ಸೈನಿಕರ ದಾಳಿಯು ಪಾಕ್ಗೆ ನಡುಕ ಉಂಟುಮಾಡಿದೆ ಎಂದು ತಿಳಿಸಿದರು.
ಪಿಒಕೆ ವಿಷಯದಲ್ಲಿ ನಮ್ಮ ಪ್ರಶ್ನೆ ಏನೆಂದರೆ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದಕ್ಕಿಂತ ಪಾಕಿಸ್ಥಾನಕ್ಕೆ ಆದ ಮುಖಭಂಗ ಮತ್ತು ನಮ್ಮ ಸೈನಿಕರ ಮೇಲುಗೈ ಗಮನಿಸಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಇದನ್ನೂ ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಡಿಜಿಎಂಒಗಳ ಸಭೆಯನ್ನು ಕರೆದಿದ್ದರು. ಆದರೆ ಈ ಸಭೆ ಸಂಜೆಗೆ ಮುಂದೂಡಿಕೆಯಾಗಿದೆ ಎಂದು ನುಡಿದರು.