ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಮೂಲಕ ಕಾಯಿಯನ್ನು ಕೃತಕವಾಗಿ, ಬೇಗನೆ ಹಣ್ಣಾಗಿಸುವಂತೆ ಮಾಡಲಾಗುತ್ತದೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವ ಅಪಾಯವಿದೆ. ರಾಸಾಯನಿಕ ಬೆರೆತ ಮಾವಿನ ಹಣ್ಣನ್ನು ಸುಲಭವಾಗಿ ಹೀಗೆ ಪತ್ತೆ ಮಾಡಿ.
ಸಿಪ್ಪೆಯನ್ನು ಗಮನಿಸಿ
ಮಾವಿನ ಸಿಪ್ಪೆಯನ್ನು ಚೆನ್ನಾಗಿ ಗಮನಿಸಿ – ಅದರ ಬಣ್ಣವು ಏಕರೂಪವಾಗಿದ್ದರೆ, ಅದು ಒಳ್ಳೆಯ ಮಾವು ಆಗಿರುತ್ತದೆ. ಆದರೆ ಸಣ್ಣ ಕಪ್ಪು ಚುಕ್ಕೆಗಳಿದ್ದರೆ, ನೀವು ಜಾಗರೂಕರಾಗಿರಬೇಕು. ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣು ಸಿಹಿ ಮತ್ತು ಹೆಚ್ಚು ಪರಿಮಳ ಹೊಂದಿರುತ್ತದೆ. ಆದರೆ ಕೃತಕವಾದ ಮಾವಿನ ಹಣ್ಣು ಹೆಚ್ಚು ಸುವಾಸನೆಯನ್ನು ಹೊಂದಿರುವುದಿಲ್ಲ.
ಹೀಗೆ ಪರಿಶೀಲನೆ ಮಾಡಿ
ಮಾವಿನ ಹಣ್ಣನ್ನು ಖರೀದಿಸುವಾಗ ಅದನ್ನು ಲಘುವಾಗಿ ಒತ್ತಿ. ನೀವು ಮಾವಿನಹಣ್ಣನ್ನು ಒತ್ತಿದಾಗ ಗಟ್ಟಿಯಾಗಿದ್ದರೆ, ಮಾವು ಸರಿಯಾಗಿ ಹಣ್ಣಾಗಿಲ್ಲ ಮತ್ತು ಅದನ್ನು ರಾಸಾಯನಿಕ ಬಳಸಿ ಹಣ್ಣಾಗಿಸಲಾಗಿದೆ ಎಂದು ತಿಳಿಯಬಹುದು. ಮಾವು ಸ್ವಾಭಾವಿಕವಾಗಿ ಹಣ್ಣಾಗಿದ್ದರೆ ಒತ್ತಿ ನೋಡುವಾಗಲೇ ತಿಳಿಯುತ್ತದೆ.
ಬಕೆಟ್ ಪರೀಕ್ಷೆ ಮಾಡಿ
ಕೃತಕವಾಗಿ ಮಾರಾಟ ಮಾಡುವ ಮಾವಿನ ಹಣ್ಣು ಮೃದುವಾಗಿರಬಹುದು ಅಥವಾ ಸ್ವಲ್ಪ ವಿಭಿನ್ನವಾದ ರುಚಿಯನ್ನು ಹೊಂದಿರಬಹುದು. ಇದನ್ನು ಪರೀಕ್ಷೆ ಮಾಡಲು ಒಂದು ಬಕೆಟ್ಗೆ ನೀರು ಹಾಕಿ ಮತ್ತು ಆ ನೀರಿನಲ್ಲಿ ಮಾವು ಹಾಕಿ ಇಡಿ. ಈ ಮಾವಿನ ಹಣ್ಣುಗಳು ಮುಳುಗಿದರೆ, ಅವು ನೈಸರ್ಗಿಕವಾಗಿ ಹಣ್ಣಾಗಿವೆ ಎಂದರ್ಥ. ಅವು ಮುಳುಗಡೆ ಆಗದೆ ತೇಲುತ್ತಿದ್ದರೆ ಕೃತಕವಾಗಿ ಬೆಳೆಸಲಾಗಿದೆ ಎಂದರ್ಥ.
ಅಡುಗೆ ಸೋಡಾ ಪರೀಕ್ಷೆ
ಸ್ವಲ್ಪ ಅಡುಗೆ ಸೋಡಾವನ್ನು ನೀರಿಗೆ ಸೇರಿಸಿ ಮಾವಿನ ಹಣ್ಣನ್ನು ಅರ್ಧ ಗಂಟೆಯವರೆಗೆ ನೆನೆಸಿ ಇಡಿ. ನಂತರ ನಂತರ ಮಾವನ್ನು ಸ್ವಚ್ಛವಾಗಿ ತೊಳೆಯಿರಿ. ಒಂದು ವೇಳೆ ಮಾವಿನ ಹಣ್ಣಿನ ಬಣ್ಣ ಬದಲಾದರೆ, ಅವು ರಾಸಾಯನಿಕವಾಗಿ ಮಾಗಿದವು ಎಂದು ಅರ್ಥ ಮಾಡಿಕೊಳ್ಳಬಹುದು.
ಬಣ್ಣ ಗಮನಿಸಿ
ರಾಸಾಯನಿಕ ಬಳಸಿದ ಮಾವಿನ ಹಣ್ಣನ್ನು ಕತ್ತರಿಸುವಾಗ ಒಳಗೆ ಹಳದಿಯಾಗಿ ಮತ್ತು ಬಿಳಿಯಾಗಿ ಕಾಣುತ್ತವೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಒಳಗೆ ಸಂಪೂರ್ಣವಾಗಿ ಹಳದಿಯಾಗಿರುತ್ತದೆ.