ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಣ್ಣ ಪ್ರಾಯದ ಯುವಕರಲ್ಲಿ ಹೃದಯಾಘಾತ ಕಾಣಿಸಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮೊನ್ನೆಯಷ್ಟೇ ಇಡೀ ಕರ್ನಾಟಕವನ್ನೇ ನಗಿಸಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಸಾವು ಎಲ್ಲರಿಗೂ ದೊಡ್ಡ ಆಘಾತವನ್ನ ತಂದುಕೊಟ್ಟಿದೆ. ಕೇವಲ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಮೊದಲೆಲ್ಲ ಐವತ್ತರ ನಂತರ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಈಗ ಯುವಕರಲ್ಲಿ , ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಕರು, ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಈ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಯಾಕೆ ಈ ಕಾಯಿಲೆಯಿಂದಾಗಿ ಹೆಚ್ಚಿನವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಅನ್ನೋದನ್ನ ನೋಡುವುದಾದರೆ. ಕೆಲವರು ತಮ್ಮ ಫಿಸಿಕಲ್ ಫಿಟ್ನೆಸ್ ಕಾಪಾಡುವ ಭರದಲ್ಲಿ ಜಿಮ್ನಲ್ಲಿ ಮಾಡುವ ಅತಿಯಾದ ವರ್ಕೌಟ್ನಿಂದಾಗಿ, ಹೃದಯಕ್ಕೆ ಅತಿಯಾದ ಒತ್ತಡ ಬೀಳುವುದರಿಂದ, ಇವತ್ತಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ. ಅಲ್ಲದೇ ಜಡಜೀವನ ಶೈಲಿ, ಅನಾರೋಗ್ಯಕಾರಿ ಆಹಾರಪದ್ಧತಿ ಇದೆಲ್ಲದರಿಂದ ಸಣ್ಣ ವಯಸ್ಸಿನಲ್ಲಿಯೇ ಹೃದಯದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿದೆ ಅನ್ನೋ ಮಾತು ಇದೆ. ಆದರೆ ಇದೆಲ್ಲವನ್ನ ಹೊರತು ಪಡಿಸಿಯೂ ಕೆಲವೊಂದು ಕಾರಣದಿಂದ ಈ ಹೃದಯಾಘಾತ ಆಗುತ್ತದೆ.
ಇದರಲ್ಲಿ ಒಂದು ಕಾರಣ ಡಿಜೆ !! ಆಶ್ಚರ್ಯ ಆಗಬಹುದು ಆದರೆ ನಂಬಲೇಬೇಕು. ಹೌದು ಸಂಗೀತ ಇಷ್ಟ ಪಡದೆ ಇರೋರು ಯಾರು ಹೇಳಿ? ಈ ಸಂಗೀತ – ಮ್ಯೂಸಿಕ್ ಇಷ್ಟ ಪಡುವರಲ್ಲಿ ಕೆಲವೊಂದು ವಿಧಗಳಿವೆ. ಕೆಲವರಿಗೆ ಇಂಪಾದ ಶಾಸ್ತ್ರೀಯ ಸಂಗೀತ ಬೇಕು , ಕೆಲವರಿಗೆ ಸಿನಿಮಾ ಹಾಡುಗಳು , ಆದ್ರೆ ಇನ್ನೊಂದಿಷ್ಟು ಗುಂಪಿನ ಜನರಿಗೆ ಈ ಸಿನಿಮಾ ಹಾಡಿಗೆ ಪಾಶ್ಚಾತ್ಯ ಶೈಲಿಯ ಪಾಪ್ ಮ್ಯೂಸಿಕ್ ಎಲ್ಲ ಮಿಕ್ಸ್ ಮಾಡಿ ಎದೆ ಬಿರಿಯುವಂತ್ತಾ ಹಾಡುಗಳು ಅಂದ್ರೆ ಹುಚ್ಚು… ಇದಕ್ಕೆ ನಮ್ಮಲ್ಲಿ ಡಿಜೆ ಮ್ಯೂಸಿಕ್ ಅನ್ನೋರೆ ಹೆಚ್ಚು.
ಇನ್ನು ಮದುವೆ, ಮೆಹಂದಿ, ಸಂಗೀತ್, ಬರ್ತ್ಡೇ ಪಾರ್ಟಿಯಲ್ಲಿ ಮಧ್ಯರಾತ್ರಿಯ ತನಕ ಡಿಜೆ ಸೌಂಡ್ ಗೆ ಹೆಜ್ಜೆ ಹಾಕೋದು ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಅದೊಂದು ಬಹಳ ಖುಷಿ ಕೊಡುತ್ತದೆ. ಇನ್ನು ಯುವಕರಿಗಂತೂ ಹೇಳೋದೇ ಬೇಡ.. ಅಷ್ಟರ ಮಟ್ಟಿಗೆ ಎಲ್ಲರಿಗೂ ಹುಚ್ಚು ಹಿಡಿಸಿದೆ ಈ ಡಿಜೆ ಹಾಡುಗಳು… ಆದ್ರೆ ಅತಿಯಾದ್ರೆ ಅಮೃತನೂ ವಿಷ ಅನ್ನೋ ಮಾತು ಸುಳ್ಳಲ್ಲ… ಇತ್ತೀಚಿಗೆ ಈ ಕಿವಿ ತಮಟೆ ಹರಿಯೋ ಹಾಗೆ ಸೌಂಡ್ ಮಾಡುವ ದೊಡ್ಡ ಸ್ಪೀಕರ್ ಗಳನ್ನ ಹಾಕಿ ಡಿಜೆ ಬಾರಿಸಿ, ಇನ್ನೇನು ಹಸಮನೆಯೇರಿರೋ ವರ, ಜೀವನ ನೋಡಬೇಕಿದ್ದ ಪುಟ್ಟ ಮಕ್ಕಳ ಜೀವವೇ ಹೋಗಿದೆ. ಇದು ಅಕ್ಷರಶಃ ಸತ್ಯ.
ಈ ಹಿಂದೆ ಫೆ . 15, 2020 ರಲ್ಲಿ ಮದುವೆ ಸಂಭ್ರಮಕ್ಕೆ ಹಾಕಿದ್ದ ಡಿಜೆ ಮ್ಯೂಸಿಕ್ ಯುವಕನ ಜೀವವನ್ನೇ ಬಲಿ ಪಡೆದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿತ್ತು. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ ‘ಬರಾತ್’ ನಲ್ಲಿ ಡಿಜೆ ಸಂಗೀತ ಹೈಪಿಚ್ ನಿಂದಾಗಿ ಮದುಮಗ ಹೃದಯ ಸ್ಥಂಭನಗೊಂಡು ಪ್ರಾಣ ಬಿಟ್ಟಿದ್ದ. ಮದುವೆ ಬರಾತ್ ಕಾರ್ಯಕ್ರಮದಲ್ಲಿ ಡಿಜೆ ಸದ್ದು ಹೆಚ್ಚಿನ ಡೆಸಿಬೆಲ್ ನಿಂದ ಕೂಡಿತ್ತು ಅಂತ ಸ್ವತಃ ಕುಟುಂಬದವರೇ ತಿಳಿಸಿದ್ದರು.
ಮಾ. 6, 2023: ಬಿಹಾರದ ಸೀತಮಾರಿ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮಂಟಪದ್ದಲ್ಲಿದ್ದ ವರ ಇದ್ದಕ್ಕಿದ್ದಂತೆ ಪ್ರಾಣಬಿಟ್ಟಿದ್ದ.. ಮೆರವಣಿಗೆ ಬರುವ ತನಕ ಎಲ್ಲವೂ ಚೆನ್ನಾಗಿತ್ತು. ಸುರೇಂದ್ರ ಕೂಡ ಚೆನ್ನಾಗಿದ್ದ. ಆದರೆ, ಡಿಜೆ ಸೌಂಡ್ ಕಡಿಮೆ ಮಾಡುವಂತೆ ಆತ ಹೇಳುತ್ತಿದ್ದ. ಆದರೆ, ಯಾರೂ ಗಮನ ಹರಿಸಲಿಲ್ಲ ಅಂತ ವರನ ತಮ್ಮ ಬೇಸರ ವ್ಯಕ್ತ ಪಡಿಸಿದರು. ಹೃದಯಾಘಾತ ಆಗಿರೋದು ಸ್ಪಷ್ಟ ಅಂತ ವೈದ್ಯರೂ ಸ್ಪಷ್ಟ ಪಡಿಸಿದರು.
ಇನ್ನು 18 ಅಕ್ಟೋಬರ್ 2024: ಡಿಜೆ ಸೌಂಡ್ಗೆ ಬಾಲಕ ಮೃತಪಟ್ಟ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿತ್ತು. ಕೇವಲ 13 ವರ್ಷದ ಮೃತ ಬಾಲಕ ಸಮರ್ ಬಿಲೋರ್ ನಿಗೆ ಬಾಲ್ಯದಿಂದಲೂ ಹೃದಯದ ಕಾಯಿಲೆ ಇತ್ತು… ಆದರೂ ಅವನ ಆರೋಗ್ಯ ಚೆನ್ನಾಗಿಯೇ ಇತ್ತು ಅಂತ ಅವರ ತಾಯಿ ಹೇಳ್ಕೊಂಡಿದ್ರು.. ಅಧಿಕ ಶಬ್ದವನ್ನು ದೇಹ ತಡೆದುಕೊಳ್ಳಲು ಸಾಧ್ಯವಾಗದೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಅಂತ ವೈದ್ಯರು ಹೇಳಿದ್ರು ಅಂತ ವರದಿಯಾಗಿತ್ತು. ಇದು ಕೆಲವೊಂದು ಉದಾಹರಣೆ ಅಷ್ಟೇ ಇನ್ನು ಇದೆ ಈ ತರಹದ ಅನೇಕ ಕೇಸ್ ಗಳನ್ನ ನಾವು ನೋಡಬಹುದು.
ಹೃದಯಾಘಾತ ಅಂದರೆ ಏನು?
ಹೃದಯಕ್ಕೆ ರಕ್ತ ಸಂಚಲನ ಹಠಾತ್ ಆಗಿ ಬ್ಲಾಕ್ ಆಗುತ್ತದೆ. ಇದರ ಪ್ರತಿಫಲ ಹೃದಯ ಸ್ತಂಭನ ಉಂಟಾಗತ್ತದೆ. ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಇದನ್ನು ಹೃದಯಾಘಾತ ಅಂತ ಕರೆಯಲಾಗುತ್ತದೆ.