ನವದೆಹಲಿ : 5ನೇ ಪ್ರಯತ್ನದಲ್ಲಿ ಐಪಿಎಸ್ ಹುದ್ದೆ ಪಡೆದಿರುವ ಹರಿರಾಮ್ ಶಂಕರ್ ಅವರ ಜರ್ನಿ ಅನೇಕ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಸ್ಪೂರ್ತಿ.
ಹರಿರಾಮ್ ಶಂಕರ್ ಕೇರಳದ ತ್ರಿಶೂರ್ ಮೂಲದವರು. ಅವರ ತಂದೆ ವೆಂಕಟಾಚಲಂ ವಿ ಎಚ್, ಐಎಂಜಿ ಕೊಚ್ಚಿಯಲ್ಲಿ ಸೆಕ್ಷನ್ ಆಫೀಸರ್. ಅವರ ತಾಯಿ ತ್ರಿಶೂರ್ ದ ವೈದ್ಯರತ್ನಂ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವೈದ್ಯೆ.
ಶಂಕರ್ ಎನ್ ಐಟಿ ಕ್ಯಾಲಿಕಟ್ ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತ್ರಿಶೂರ್ ದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಮತ್ತು ಮಾಧ್ಯಮಿಕ ಶಾಲೆಯನ್ನು ತ್ರಿಶೂರ್ ಜಿಲ್ಲೆಯ ಪೂಚಟ್ಟಿಯಲ್ಲಿರುವ ಭಾರತೀಯ ವಿದ್ಯಾಭವನದ ವಿದ್ಯಾ ಮಂದಿರದಲ್ಲಿ ಪೂರೈಸಿದ್ದಾರೆ. ಪದವಿ ಓದಿದ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಗೆ ಪ್ರಯತ್ನಿಸಿದರು.
2 ಬಾರಿ ವಿಫಲರಾದ ಬಳಿಕ ಉದ್ಯೋಗ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸಲು ಮುಂದಾದರು. ಈ ವೇಳೆ ಬ್ಯಾಂಕ್ ನಲ್ಲಿ ಉದ್ಯೋಗವನ್ನೂ ಮಾಡಿದರು. ಆದರೆ ಸಮಯದ ಅಭಾವದಿಂದ ಕೆಲಸ ಬಿಟ್ಟು ಮತ್ತೆ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೆ ತಯಾರಿ ನಡೆಸಲು ಮುಂದಾದರು.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಎರಡು ಬಾರಿ ವಿಫಲರಾದ ಬಳಿಕ ಶಂಕರ್ 4ನೇ ಬಾರಿ ಐಎಎಎಸ್ ಹುದ್ದೆ ಪಡೆದರು. ನಂತರ 5ನೇ ಪ್ರಯತ್ನದಲ್ಲಿ ತಾವು ಬಯಸಿದಂತೆ ಐಪಿಎಸ್ ಹುದ್ದೆ ಪಡೆದುಕೊಂಡರು. ನಿರಂತರ ಪ್ರಯತ್ನದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅವರು ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.