ಬೆಂಗಳೂರು: ನಗರದ ಬೊಮ್ಮನಹಳ್ಳಿಯಲ್ಲಿ ಕಳ್ಳನೊಬ್ಬ ಬೆತ್ತಲೆಯಾಗಿ ಬಂದು, ಅಂಗಡಿ ಗೋಡೆ ಕೊರೆದು ಬರೋಬ್ಬರಿ 85 ಮೊಬೈಲ್ ಎಗರಿಸಿರುವ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬೆತ್ತಲೆಯಾಗಿ ಕಳ್ಳತನಕ್ಕೆ ಬಂದಿದ್ದ ಖದೀಮ, ಕೃತ್ಯವೆಸಗಿ ಪರಾರಿಯಾಗಿದ್ದಾನೆ. ದಿನೇಶ್ ಎಂಬುವವರ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ನಲ್ಲಿ ಕಳ್ಳತನ ನಡೆದಿದೆ.
ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಧರಿಸಿದ ಬಟ್ಟೆಗಳ ಮೂಲಕ ಅವರನ್ನು ಪೊಲೀಸರು ಕಂಡು ಹಿಡಿಯುತ್ತಾರೆ. ಹಾಗಾಗಿ ಪೊಲೀಸರಿಗೆ ಯಾಮಾರಿಸಲು ಈ ಕಳ್ಳ ಬೆತ್ತಲೆಯಾಗಿ ಕಳ್ಳತನಕ್ಕಿಳಿದಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೃತ್ಯ ನಡೆದ ಮಾರನೇ ದಿನ ಬೆಳಗ್ಗೆ ಅಂಗಡಿ ಓಪನ್ ಮಾಡಲು ಮಾಲೀಕ ದಿನೇಶ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.