ನವದೆಹಲಿ: ‘ಇಂಡಿಯಾ ಮೈತ್ರಿಕೂಟದ ಭವಿಷ್ಯ ಉಜ್ವಲವಾಗಿದೆ ಎನಿಸುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಪ್ರಸ್ತುತ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಮೈತ್ರಿ ದುರ್ಬಲಗೊಂಡಿದೆ. ಇಂಡಿಯಾ ಮೈತ್ರಿಕೂಟದ ಭವಿಷ್ಯವು ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಉಜ್ವಲವಾಗಿಲ್ಲ. ಮೈತ್ರಿ ಇನ್ನೂ ಹಾಗೆಯೇ ಇದೆ ಎಂದು ಅವರು ಭಾವಿಸುತ್ತಾರೆ. ಆದರೆ ನನಗೆ ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಇಂಡಿಯಾ ಮೈತ್ರಿಕೂಟದ ಮಾತುಕತೆ ತಂಡದ ಭಾಗವಾಗಿದ್ದ ಸಲ್ಮಾನ್ (ಖುರ್ಷಿದ್) ಮಾತ್ರ ಉತ್ತರಿಸಬಲ್ಲರು ಎಂದಿದ್ದಾರೆ. ಮೈತ್ರಿ ಸಂಪೂರ್ಣವಾಗಿ ಹಾಗೆಯೇ ಉಳಿದರೆ, ನನಗೆ ತುಂಬಾ ಸಂತೋಷವಾಗುತ್ತದೆ. ಆದರೆ ಅದು ದುರ್ಬಲಗೊಂಡಂತೆ ಕಾಣುತ್ತದೆ’ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಗೂ ಮುನ್ನ ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಇಂಡಿಯಾ ಮೈತ್ರಿಕೂಟವನ್ನು ರಚಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆದರೂ ಬಿಜೆಪಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ನರೇಂದ್ರ ಮೋದಿಯೇ ಮತ್ತೆ ಪ್ರಧಾನಿಯಾದರು.