ಮಂಗಳೂರಿನಲ್ಲಿ ಕೂಲಿ ಕಾರ್ಮಿಕೆಯಾಗಿದ್ದ ಮೂರು ಮಕ್ಕಳ ತಾಯಿ ಹೆಣವಾಗಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಹಿಂದಿನ ಅಸಲಿ ಕಹಾನಿಯನ್ನು ಬಯಲು ಮಾಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಅನಾಮಧೇಯ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯ ಮೊಬೈಲ್ ಕಾಲ್ ಬೆನ್ನಟ್ಟಿದ ಪೊಲೀಸರೇ ಬಿಗ್ ಶಾಕ್ ಆಗಿದ್ದಾರೆ. ಇನ್ನು ಸಹಜ ಸಾವು ಎಂದುಕೊಂಡ ಕುಟುಂಬಸ್ಥರು ಸಹ ಈಗ ಕಂಗಾಲಾಗಿದ್ದಾರೆ.
ಏಪ್ರಿಲ್ 23ರಂದು ಲಕ್ಷ್ಮೀ ಇಂಗಳಗಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು, ಮೊಬೈಲ್ ಕರೆಗಳ ಹಿಸ್ಟರಿ ಜಾಲಾಡಿದಾಗ ಕೊಲೆಯ ಹಿಂದೆ ಪ್ರೇಮ ಕಥೆಯ ವಾಸನೆ ಬಂದಿದೆ. ಲಕ್ಷ್ಮೀಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ತಂಡ ಚಾಣಾಕ್ಷಣದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವಕನೊಂದಿಗೆ ಮಹಿಳೆ ಲವ್ವಿಡವ್ವಿ ಹಾಗೂ ಕೊಲೆ ಕಹಾನಿ ಬಯಲಿಗೆ ಬಂದಿದೆ.
ಅದು 2025 ಏಪ್ರಿಲ್ 23 ರಂದು ಸೂರಣಗಿ ಗ್ರಾಮದ ದೊಡ್ಡ ರಸ್ತೆಯ ಬಯಲು ಬಸವೇಶ್ವರ ದೇವಸ್ಥಾನ ಬಳಿ 35 ವರ್ಷದ ಮಹಿಳೆ ಅನಾಮಧೇಯ ಶವ ಪತ್ತೆಯಾಗಿತ್ತು. ಮಹಿಳೆ ಶವ ಪತ್ತೆಯಾದ ಸುದ್ದಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಗಾಬರಿಯಾದ ಸೂರಣಗಿ ಗ್ರಾಮಸ್ಥರು ತಕ್ಷಣ ಲಕ್ಷ್ಮೀಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೀಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ತಂಡ ಪರಿಶೀಲನೆ ಮಾಡಿತ್ತು. ಆ ವೇಳೆ ಇದು ಸಹಜ ಸಾವಲ್ಲ ಪಕ್ಕಾ ಕೊಲೆ ಅನ್ನೋ ಅನುಮಾನ ಮೂಡಿತ್ತು.
ಆ ಒಂದು ಸುಳಿವಿನಿಂದ ಹಂತಕ ಪತ್ತೆ:
ಬಳಿಕ ಪ್ರಕರಣ ತನಿಖೆ ಚುರುಕುಗೊಳಿಸಿದಾಗ ವಾರದ ಬಳಿಕ ಕೊಲೆಯಾದ ಮಹಿಳೆ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ ಅಂತ ಗೋತ್ತಾಗಿದೆ. ಆಗ ಮೃತಳ ಸಹೋದರಿ ಸಾವಿನಲ್ಲಿ ಅನುಮಾನ ಇದೆ ಎಂದು ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ತನಿಕೆ ಕೈಗೊಂಡ ಪೊಲೀಸರಿಗೆ ಅದೊಂದು ಫೋನ್ ಒಂದು ಸಣ್ಣ ಸುಳಿವು ಸಿಕ್ಕಿತ್ತು. ಅದೇ ಸುಳಿವಿನ ಮೇರೆ ತನಿಖೆ ನಡೆಸಿದ ಪೊಲಿಸರಿಗ ಹಂತಕ ಇತಿಹಾಸವೇ ಸಿಕ್ಕಿದೆ.
ಯುವಕನಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್:
ಇನ್ನೂ ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದಾರೆ. ಆದ್ರೆ ಗಂಡನಿಂದ ಲಕ್ಷ್ಮೀ ದೂರವಾಗಿದ್ದಳು ಬದುಕು ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ವೇಳೆಯಲ್ಲಿ ಹಾವೇರಿ ಜಿಲ್ಲೆಯ ಸುನಿಲ್ ಎನ್ನುವ ಹದಿಹರೆಯದ ಯುವಕ ಪರಿಚಯವಾಗಿದ್ದು, ಇಬ್ಬರು ನಡುವೆ ಲವ್ ಆಗಿದೆ. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಬೆಳೆದಿತ್ತು. ಆದ್ರೆ 30 ವರ್ಷದ ಸುನೀಲ್ ಮದುವೆ ಮಾಡಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಅದೇ ವೇಲೆ ಲಕ್ಷ್ಮೀ 5 ಲಕ್ಷ ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲವಾದರೆ ನಮ್ಮ ಅನೈತಿಕ ಸಂಬಂಧ ವಿಷಯ ಬಹಿರಂಗ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭ ಮಾಡಿದ್ದಾಳೆ.
ಕಾರಿನಲ್ಲಿ ಕರೆದೊಯ್ದು ಹತ್ಯೆ:
ಲಕ್ಷ್ಮೀಯ ಬ್ಲ್ಯಾಕ್ಮೇಲ್ನಿಂದ ಕಂಗಾಲಾದ ಯುವಕ, ಸುನೀಲ್ ಗೆಳೆಯರಾದ ಸಿದ್ದಪ್ಪ, ನಟರಾಜ್, ರಮೇಶ ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ಅದರಂತೆ ಏಪ್ರಿಲ್ 22ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದರು. ಸದ್ಯ ಪೊಲೀಸರು ಚಾಣಾಕ್ಷತನದಿಂದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಇನ್ನು ಕಾರು, ಮೊಬೈಲ್, ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್ ಅನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಒಟ್ಟಿನಲ್ಲಿ ಮೂರು ಮಕ್ಕಳ ತಾಯಿ ಮದುವೆ ಆಗದ ಯವಕನನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಹೆಣವಾಗಿದ್ದಾಳೆ. ಇನ್ನು ಮದುವೆ ಮಾಡಿಕೊಂಡು ಸುಂದರ ಜೀವನ ನಡೆಸಬೇಕಾದ ಯುವಕ, ಮಹಿಳೆ ಹಿಂದೆ ಬಿದ್ದು ಇದೀಗ ಜೈಲು ಸೇರಿದ್ದಾನೆ. ಹಾಗೇ ಸ್ನೇಹಿತನಿಗೆ ಸಹಾಯ ಮಾಡಲೂ ಹೋದ ಮೂವರು ಗೆಳೆಯರು ಸಹ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.