ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣ ಹಾಗೂ ವಾರ್ಡ್ ನಂ. 35 ರಲ್ಲಿನ ವಿವಿಧ ಮೂಲಭೂತ ಸೌಕರ್ಯ ನಿರ್ಮಾಣದ ಕಾಮಗಾರಿಗಳಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಶನಿವಾರದಂದು ಚಾಲನೆ ನೀಡಿದರು.
ನಗರಸಭೆಯ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ 3.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಒಣ ತ್ಯಾಜ್ಯ ಸಂಸ್ಕರಣಾ ಘಟಕದ M.R.F (Material Recovery Fascility) ಕಾಮಗಾರಿಗೆ ಶಾಸಕ ವೀರೇಂದ್ರ ಪಪ್ಪಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಒಣ ತ್ಯಾಜ್ಯ ವಸ್ತು ಸಂಸ್ಕರಣೆ ಘಟಕ ನಿರ್ಮಾಣವಾದ ನಂತರ, ಪ್ರತಿ ದಿನ ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯದಲ್ಲಿ ಮರು ಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್, ಪ್ಲಾಸ್ಟಿಕ್ ಬಾಟಲ್, ರಟ್ಟು ಕ್ಯಾನ್, ಲೋಹದ ವಸ್ತುಗಳು ಇತ್ಯಾದಿಗಳನ್ನು 20 ಹೆಚ್ಚು ವಿಧವಾಗಿ ಇಲ್ಲಿ ವಿಂಗಡಿಸಲಾಗುವುದು. ಪ್ರಸ್ತುತ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಸುಮಾರು 20 ವರ್ಷಗಳಿಂದ ಶೇಖರಣೆಯಾಗಿರುವ ಅಂದಾಜು 90 ಸಾವಿರ ಟನ್ ಗಳಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ರೂ.755 ಲಕ್ಷಗಳಿಗೆ ಟೆಂಡರ್ ಕರೆದಿದ್ದು, ಅನುಮೋದನೆಯ ಹಂತದಲ್ಲಿರುತ್ತದೆ. ಅನುಮೋದನೆಯ ನಂತರ ಈಗಾಗಲೇ ಸಂಗ್ರಹವಾಗಿರುವ ಘನತ್ಯಾಜ್ಯ ಒಂದು ವರ್ಷದಲ್ಲಿ ವಿಲೇಗೊಳಿಸಲಾಗುವುದು. ಇದರಿಂದ ಈಗಾಗಲೇ ಸಂಗ್ರಹವಾಗಿರುವ ಸುಮಾರು 10 ಎಕರೆಯಷ್ಟು ಜಾಗ ಮರು ಉಪಯೋಗಕ್ಕೆ ಬಳಸಬಹುದಾಗಿದೆ. ಒಣ ತ್ಯಾಜ್ಯ ವಸ್ತು ವಿಲೇವಾರಿ ಘಟಕ ಪ್ರಾರಂಭವಾದ ನಂತರ ತ್ಯಾಜ್ಯವು ಶೇಖರಣೆಯಾಗದಂತೆ ಸಂಪೂರ್ಣವಾಗಿ ವಿಂಗಡಿಸಿ ಸಂಸ್ಕರಿಸಿ ಪರಿಸರ ಮಾಲಿನ್ಯವಾಗದಂತೆ ವಿಲೇವಾರಿ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಜೆ. ಜಾಫರ್ ಸಾಬ್ ಇವರು ಶಾಸಕರಿಗೆ ಮಾಹಿತಿ ನೀಡಿದರು.
ಬಳಿಕ, 2023- 24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಸುಮಾರು 50 ಲಕ್ಷ ರೂ.ಗಳ ಅನುದಾನದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅನುಮೋದನೆಯಾದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ವಾರ್ಡ್ ನಂಬರ್ 35ರಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಎಂ.ರೇಣುಕಾ, ನಗರಸಭೆ ಸದಸ್ಯ ಹೆಚ್.ಎನ್.ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ, ನಗರಸಭೆ ಸದಸ್ಯರುಗಳಾದ ಎಸ್. ಭಾಸ್ಕರ್ ರವರು, ತಾರಕೇಶ್ವರಿ, ಗೋಪ್ಪೆ ಮಂಜುನಾಥ, ಮೊಹಮ್ಮದ್ ದಾವುದ್, ಎಸ್ ಜಯಪ್ಪ ಹಾಗೂ ನಾಮ ನಿರ್ದೇಶಿತ ಸದಸ್ಯ ಶಬ್ಬೀರ್ ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.