ಬೆಂಗಳೂರು : ಕಾಂಗ್ರೆಸ್ ಸರ್ಕಾರದಿಂದ ನಾಳೆ ನಡೆಯುವ ಸಾಧನಾ ಸಮಾವೇಶ ಸಂಬಂಧ ಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ ಪೋಸ್ಟರ್ ಬಿಡುಗಡೆ ಮಾಡಿದೆ.
ಪೋಸ್ಟರ್ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು, ರಾಜ್ಯ ಸರ್ಕಾರ ಕಳೆದ 2 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ರಾಜ್ಯದ ಜನತೆಗೆ ತೋರಿಸುವುದಕ್ಕೆ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ ಬೆಂಗಳೂರು ಮಹಾನಗರದಲ್ಲಿ ಸುರಿದ ಭಾರೀ ಮಳೆಗೆ ಈ ಕಾಂಗ್ರೆಸ್ ಸರ್ಕಾರದ ಸಾಧನೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಸಾಧನೆ ಚಿತ್ರ ಬಾಕಿ ಇದೆ ಎಂದು ವ್ಯಂಗ್ಯವಾಡಿದರು.
ಹವಾಮಾನ ಇಲಾಖೆಯು ಒಂದು ವಾರದ ಮುಂಚೆ ಮಳೆಯ ಮುನ್ಸೂಚನೆ ನೀಡಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಬೆಂಗಳೂರು ಮಹಾನಗರದಲ್ಲಿ ಆಗಿರುವ ಮಳೆಯ ಅವಾಂತರಕ್ಕೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ನೇರಕಾರಣ ಎಂದು ಅವರು ಆರೋಪಿಸಿದರು.
ಕಳೆದ 2 ವರ್ಷಗಳಲ್ಲಿ ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಬಂದು, ಹಿಂದಿನ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಮಸೂದೆಗೆ ಅನುಮೋದನೆ ಪಡೆದುಕೊಂಡ ನಂತರ ಬ್ರ್ಯಾಂಡ್ ಬೆಂಗಳೂರು ಹೋಗಿ ಗ್ರೇಟರ್ ಬೆಂಗಳೂರು ಆಗಿದೆ. ಈಗ ಗ್ರೇಟರ್ ಬೆಂಗಳೂರು ಹೋಗಿ ಮುಳುಗಡೆ ಬೆಂಗಳೂರು ಆಗಿದೆ. ಇದು ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಬೆಂಗಳೂರು ಮಹಾನಗರದಿಂದ ಕೋಟ್ಯಂತರ ತೆರಿಗೆ ಹಣ ಸಂಗ್ರಹವಾದರೂ, ಬೆಂಗಳೂರಿನಲ್ಲಿ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಉಸ್ತುವಾರಿಯಾದ ಡಿ.ಕೆ ಶಿವಕುಮಾರ್ ರವರು ಮಾಡಿರುವುದಿಲ್ಲ. ಆದರೆ ಇವರು ಒಂದುವಾರದಿಂದ ಪ್ರಚಾರದ ಸಲುವಾಗಿ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿರುವುದೇ ಇವರ ಸಾಧನೆಯಾಗಿದೆ ಎಂದು ಟೀಕಿಸಿದರು.
ಈ ವರ್ಷದಲ್ಲಿ ಜೂನ್ ತಿಂಗಳ ಮುನ್ನ ಅಂದರೆ ಮೇ ಮೊದಲವಾರದಲ್ಲಿ ಮುಂಗಾರು ಪ್ರಾರಂಭವಾಗಿ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಆದರೂ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆಡಳಿತ ಭಾಗವಾದ ಗ್ರೇಟರ್ ಬೆಂಗಳೂರು ಮಳೆ ಅವಾಂತರ ಮುಂಜಾಗ್ರತ ಕ್ರಮದ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.