ಚಿತ್ರದುರ್ಗ… ನಗರದ ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕರಾದ ಮಂಜುನಾಥ್ ರವರ ಕುಟುಂಬ ಖಾಲಿ ಸೈಟ್ ನಲ್ಲಿ, ಬೇಲಿ ಹಾಕಿ, ಹನಿ ನೀರಾವರಿ ಮಾಡಿ, ತರಕಾರಿ ಬೆಳೆದು, ಇತರರಿಗೆ ಮಾದರಿಯಾಗಿದ್ದು, ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ನಗರದ ಜನರು ಸಹ ಖಾಲಿ ಸೈಟ್ಗಳಲ್ಲಿ, ಟೆರೆಸ್ ಮೇಲೆ, ತರಕಾರಿಗಳನ್ನು ಬೆಳೆದು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದರೇ ಜನರ ಮೆಚ್ಚುಗೆ ಗಳಿಸುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿಯವರು ಕರೆ ನೀಡಿದ್ದಾರೆ.
ಅವರು ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿರುವ ನಿವೃತ್ತಿ ಶಿಕ್ಷಕರಾದ ಮಂಜುನಾಥ್ ರವರ ಮನೆಯ ಪಕ್ಕದ ಖಾಲಿ ಸೈಟ್ ನಲ್ಲಿ ಬೆಳೆದ ಬದನೆಕಾಯಿ, ಸೌತೆಕಾಯಿ, ಟೊಮೆಟೊ ಇನ್ನಿತರ ತರಕಾರಿಗಳನ್ನ ಸಂಗ್ರಹಿಸುತ್ತಾ ಮಾತನಾಡುತ್ತಿದ್ದರು.
ಗ್ರಾಮೀಣ ಜನರು ನಗರಗಳ ಕಡೆ ವಲಸೆ ಬಂದರೂ ಸಹ ತಮ್ಮ ಮೂಲ ಉದ್ಯೋಗವಾದ ಕೃಷಿ ಕೈಗಾರಿಕೆಯನ್ನು, ಕೃಷಿ ಚಟುವಟಿಕೆಯನ್ನ ಮರೆಯಲು ಸಾಧ್ಯವಾಗುವುದಿಲ್ಲ, ಬಿಡುವಿನ ಸಮಯದಲ್ಲಿ ಒಂದಿಷ್ಟು ಖಾಲಿ ಜಾಗದಲ್ಲಿ ತರಕಾರಿಗಳನ್ನು ಬೆಳೆದಿಟ್ಟುಕೊಂಡು, ತಮ್ಮ ದಿನ ನಿತ್ಯದ ಬೇಡಿಕೆಗಳನ್ನ ಈಡೇರಿಸಿಕೊಳ್ಳುತ್ತಾ, ಇನ್ನೊಂದಿಷ್ಟು ಹೆಚ್ಚಾದ ತರಕಾರಿಗಳನ್ನ ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ವಿತರಿಸಿ, ಅವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು
ನಗರದ ಸುತ್ತಮುತ್ತ ಸಾಕಷ್ಟು ಖಾಲಿ ಜಾಗಗಳು ಹಾಗೆ ವ್ಯರ್ಥವಾಗಿ, ಹಾಳುಬಿಟ್ಟು ಯಾವುದೇ ಉತ್ಪನ್ನವಿಲ್ಲದಂತೆ ಮಾಡಿರುವ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ, ಆದರೆ ಟೀಚರ್ಸ್ ಕಾಲೋನಿಯಲ್ಲಿ ಖಾಲಿ ಇದ್ದ ಸೈಟಿಗೆ, ಬೆಲೆ ಹಾಕಿಕೊಂಡು, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡು, ದಿನ ನಿತ್ಯ ಒಂದಿಷ್ಟು ತರಕಾರಿ ಗಿಡಗಳಿಗೆ ನೀರುಣಿಸಿ, ತಮಗೆ ಬೇಕಾದಷ್ಟು ಬದನೆಕಾಯಿ, ಟೊಮೆಟೊ, ಸೌತೆಕಾಯಿ, ಮೂಲಂಗಿ, ಕ್ಯಾರೆಟ್, ಸೊಪ್ಪು ಬೆಳೆದುಕೊಂಡು ಜೀವನ ನಿರ್ವಹಿಸುತ್ತಿರುವ ಇಂತಹ ಶಿಕ್ಷಕ ಕುಟುಂಬಗಳು ಹೆಚ್ಚಾಗಬೇಕಾಗಿದೆ ಎಂದರು.
ಅಕ್ಕ ಪಕ್ಕದವರಿಗೆ ಖಾಲಿ ಸೈಟ್ಗಳಲ್ಲಿ ತರಕಾರಿ ಬೆಳೆಯುವ ದೃಶ್ಯವೂ ಸಹ ವಿಚಿತ್ರವಾಗಿ, ಹೊಸ ಅನುಭವವನ್ನು ನೀಡುತ್ತಿದೆ, ಈ ರೀತಿ ನಾವು ಸಹ ಖಾಲಿ ನಿವೇಶನಗಳಲ್ಲಿ ತರಕಾರಿಗಳನ್ನು ಬೆಳೆದುಕೊಳ್ಳಬಹುದಾ ಎಂದು ಅಪನಂಬಿಕೆ ಮೂಡುತ್ತದೆ, ಅದಕ್ಕೆ ವಿರುದ್ಧವಾಗಿ ಇವರು ಕಷ್ಟಪಟ್ಟು, ಸಣ್ಣ ಸೈಟ್ನಲ್ಲೇ ವ್ಯವಸಾಯದ ರೀತಿಯಲ್ಲಿ ಮಣ್ಣು ಕೆತ್ತಿ, ಹುಲ್ಲು ಕೆತ್ತಿ ಸುಂದರಗೊಳಿಸಿಕೊಂಡು ಅದಕ್ಕೆ ಬದನೆಕಾಯಿ ಸಸಿಗಳನ್ನು, ಸೌತೆಕಾಯಿ ಬೀಜಗಳನ್ನ, ಟೊಮೇಟೊ ಸಸಿಗಳನ್ನು ನೆಟ್ಟು, ಜನರ ಎದುರಿಗೆ ತರಕಾರಿಗಳನ್ನು ಉತ್ಪಾದನೆ ಮಾಡಿ, ಬೇರೆಯವರಿಗೂ ಸಹ ಈ ರೀತಿ ಸಣ್ಣ ಮಟ್ಟದ ಉತ್ಪಾದನೆ ಮುಖಾಂತರ ನಾವು ಒಂದಿಷ್ಟು ದೇಶದ ಆಹಾರ ಸಮಸ್ಯೆಯನ್ನ, ಆರ್ಥಿಕ ಸಮಸ್ಯೆಯನ್ನ ನೀಗಿಸಬಹುದು ಎಂದು ದಾರಿ ತೋರಿಸಿದ್ದಾರೆ ಎಂದರು.
ಹೆಚ್ಚುತ್ತಿರುವ ತರಕಾರಿ ಬೆಲೆ, ಬಡವರ ಕೈಗೆಟುಕದಂತಾಗಿ, ನಮ್ಮ ನಮ್ಮಲ್ಲೇ ಉತ್ಪಾದನೆ ಮಾಡಿದ ತರಕಾರಿಗಳನ್ನು ಬಳಕೆ ಮಾಡಿದರೆ, ಮಾರುಕಟ್ಟೆಯಲ್ಲಿ ಏರುತ್ತಿರುವ ತರಕಾರಿ ಬೆಲೆಯನ್ನು ಇಳಿಸಬಹುದು ಎಂದು ಗಾಂಧೀಜಿಯವರ ಕಾಲದಲ್ಲೂ ಸಹ ಸ್ವಲ್ಪಮಟ್ಟಿಗೆ ಉತ್ಪಾದನೆ ಮಾಡಿದಾಗ, ಮನುಷ್ಯ ಮಾರುಕಟ್ಟೆಯಲ್ಲಿರುವ ಬೆಲೆ ತಗ್ಗಿಸಲು ಅನುಕೂಲಕರವಾಗುತ್ತದೆ ಎಂದಿದ್ದರು. ಸ್ವಲ್ಪ ಮಟ್ಟಿಗೆ ನಾವು ಖಾದಿ ಉತ್ಪಾದನೆ ಮಾಡಿದರು ಸಹ ಮಾರುಕಟ್ಟೆಯಲ್ಲಿರುವ ಬಟ್ಟೆಯ ಬೆಲೆ ಇಳಿಯುತ್ತದೆ ಎಂಬುದನ್ನು ಅಂದು ಪ್ರಸ್ತುತಪಡಿಸಿದ್ದರು. ಅದೇ ಸಿದ್ಧಾಂತವನ್ನು ಹೀಗೂ ಸಹ ನಾವು ಸಣ್ಣ ಉತ್ಪಾದನೆ ಇದ್ದರೂ ಸಹ, ಅದು ಅಗಾಧವಾದ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳ ಬಹುದು ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.