ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ವಿರುದ್ಧದ ಮಿಲಿಟರಿ ಯುದ್ಧವನ್ನು ನಿಲ್ಲಿಸಲು ಒಪ್ಪುವ ಮೂಲಕ ಪ್ರಧಾನಿ ಮೋದಿ ಭಾರತದ ಪ್ರತಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದು ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೋದಿ ಭಾರತ ಮಾತೆಯ ಸೇವಕ ಅನ್ನೋದನ್ನ ಪಾಕಿಸ್ತಾನ ಮರೆತಿತ್ತು ಅನ್ನಿಸುತ್ತೆ. ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಹರಿಯುತ್ತಲೇ ಇರುತ್ತದೆ ಎಂದು ಹೇಳಿದ್ದರು.
ಪ್ರಧಾನಿ ಮೋದಿ ಭಾಷಣದ ತುಣುಕೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಮೂರು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
“ಮೋದಿ ಜೀ, ಪೊಳ್ಳು ಭಾಷಣ ಮಾಡುವುದನ್ನು ನಿಲ್ಲಿಸಿ. ಹೇಳಿ: ಭಯೋತ್ಪಾದನೆಯ ಕುರಿತು ಪಾಕಿಸ್ತಾನದ ಹೇಳಿಕೆಯನ್ನು ನೀವು ಏಕೆ ನಂಬಿದ್ದೀರಿ? ಟ್ರಂಪ್‌ಗೆ ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಗಳನ್ನು ಏಕೆ ತ್ಯಾಗ ಮಾಡಿದ್ದೀರಿ? ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತಿದೆ? ನೀವು ಭಾರತದ ಪ್ರತಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದೀರಿ!” ಎಂದು ರಾಹುಲ್ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದನೆ ಅಥವಾ ಮಿಲಿಟರಿ ಕ್ರಮಕ್ಕೆ ಯಾವುದೇ ಬೆಂಬಲ ನೀಡುವುದಿಲ್ಲ ಎಂಬ ಪಾಕಿಸ್ತಾನದ ಭರವಸೆಯನ್ನು ಭಾರತ ಗಮನಿಸಿದೆ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಸಶಸ್ತ್ರ ಪಡೆಗಳು ಬಲವಾಗಿ ಬೆಳೆಯುತ್ತಿರುವಾಗ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿರುವಾಗ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದ್ದಕ್ಕಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದೆ.