ಜೈಪುರ : ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ‘ಮೈಸೂರು ಪಾಕ್’ ಸೇರಿದಂತೆ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ.
ಬೇಕರಿಯೊಂದರಲ್ಲಿ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ ‘ಪಾಕ್’ ಪದವನ್ನು ತೆಗೆದುಹಾಕಿ ಅದನ್ನು ‘ಶ್ರೀ’ ಎಂದು ಬದಲಾಯಿಸಿದ್ದಾರೆ. ಇದೀಗ ಮೈಸೂರು ಪಾಕ್ ಮೈಸೂರು ಶ್ರೀಯಾಗಿ ಬದಲಾಗಿದೆ. “ನಾವು ‘ಪಾಕ್’ ಪದವನ್ನು ನಮ್ಮ ಸಿಹಿತಿಂಡಿಗಳ ಹೆಸರುಗಳಿಂದ ತೆಗೆದುಹಾಕಿದ್ದೇವೆ. ನಾವು ‘ಮೋತಿ ಪಾಕ್’ ಅನ್ನು ‘ಮೋತಿ ಶ್ರೀ’ ಎಂದು, ‘ಗೋಂದ್ ಪಾಕ್’ ಅನ್ನು ‘ಗೋಂದ್ ಶ್ರೀ’ ಎಂದು, ‘ಮೈಸೂರು ಪಾಕ್’ ಅನ್ನು ‘ಮೈಸೂರು ಶ್ರೀ’ ಎಂದು ಮರುನಾಮಕರಣ ಮಾಡಿದ್ದೇವೆ” ಎಂದು ಅಂಗಡಿಯವರು ತಿಳಿಸಿದ್ದಾರೆ.
ಮೈಸೂರಿನ ತಿಂಡಿ ಮೈಸೂರು ಪಾಕ್ ಎಂದರೆ ಕನ್ನಡದಲ್ಲಿ ಮೈಸೂರಿನ ಸಿಹಿ ಅಥವಾ ಸಕ್ಕರೆ ಸಿರಪ್ ಎಂದರ್ಥ. ಇಲ್ಲಿ ಪಾಕ್ಗೆ ಸಿಹಿ ಎಂಬ ಅರ್ಥವಿದೆ. ಆದರೆ, ಪಾಕಿಸ್ತಾನದ ಯಾವ ಹೆಸರೂ ಬೇಡವೆಂದು ಬೇಕರಿಯವರು ಈ ನಿರ್ಧಾರ ಮಾಡಿದ್ದಾರೆ.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.