ಹೊಳಲ್ಕೆರೆ : ಸಾರ್ವಜನಿಕರ ಬದುಕು ಏನೆಂದು ಅರ್ಥ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಮತಿಗಟ್ಟ ಗ್ರಾಮದಲ್ಲಿ ಮತಿಘಟ್ಟದಿಂದ ಚಿತ್ರದುರ್ಗ ತಾಲ್ಲೂಕು ಗಡಿವರೆಗೂ 34 ಕೋಟಿ ರೂ.ವೆಚ್ಚದಲ್ಲಿ 13.10 ಕಿ.ಮೀ.ಉದ್ದದ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಎರಡನೆ ಬಾರಿಗೆ ಭರಮಸಾಗರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಒಮ್ಮೆ ಗೆದ್ದವರು 2 ನೇ ಸಲ ಗೆಲ್ಲುವುದಿಲ್ಲವೆಂದು ಜನ ಮಾತಾಡಿಕೊಳ್ಳುತ್ತಿದ್ದರು. 386 ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಯುವಕರು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ ಎರಡನೆ ಬಾರಿಗೂ ಗೆಲ್ಲಿಸಿದರು. ಐದು ಜಿಲ್ಲೆಯಿಂದ ಜನತಾದಳದಿಂದ ನಾನೊಬ್ಬನೆ ಗೆದ್ದಿದ್ದು. ಅಭಿವೃದ್ದಿ ಕೆಲಸಗಳನ್ನು ಮಾಡಿದರೆ ಜನ ಎಂದಿಗೂ ಕೈಬಿಡುವುದಿಲ್ಲ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಸಾರ್ವಜನಿಕರ ಋಣ ತೀರಿಸಬೇಕೆಂಬ ಅರಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆಂದು ಹೇಳಿದರು.
ವಿಧಾನಸೌಧ ಕಟ್ಟಲು ಕೇವಲ 90 ಲಕ್ಷ ರೂ.ಗಳು ಖರ್ಚಾಗಿದೆ. ಮತಿಘಟ್ಟದಿಂದ ಚಿತ್ರದುರ್ಗ ತಾಲ್ಲೂಕು ಗಡಿವರೆಗೂ 34 ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣವಾಗುತ್ತಿದೆ. ಇನ್ನು ಮೂರು ತಲೆಮಾರುಗಳಾದರೂ ರಸ್ತೆ ಕಿತ್ತು ಹೋಗುವುದಿಲ್ಲ. ಅಷ್ಟು ಗಟ್ಟಿಮುಟ್ಟಾಗಿರುತ್ತದೆ. ತಾಲ್ಲೂಕಿನಾದ್ಯಂತ 493 ಹಳ್ಳಿಗಳಲ್ಲಿ ಎಲ್ಲೆಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆಂಬ ಜ್ಞಾನವಿಟ್ಟುಕೊಂಡು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ. ಮತದಾರರು ಏನು ಬೇಕು ಅಂತ ಕೇಳಿದರೆ ಸ್ಥಳದಲ್ಲೇ ಹಣ ಮಂಜೂರು ಮಾಡುತ್ತೇನೆ. ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಅನುದಾನ ತರುವ ತಾಕತ್ತಿದೆ ಎಂದರು.
450 ಕೋಟಿ ರೂ.ಗಳ ಅಭಿವೃದ್ದಿ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿದೆ. ಒಂದೊಂದು ರೋಡಿಗೆ ಮೂವತ್ತರಿಂದ ನಲವತ್ತು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಐದನೆ ಬಾರಿಗೆ ಶಾಸಕನಾಗಿರುವ ನನಗೆ ಸಾರ್ವಜನಿಕರ ಬದುಕು ಏನೆಂದು ಗೊತ್ತಾಗಿದೆ. ಹತ್ತು ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ಯಾರು ಕಷ್ಟ-ಸುಖಕ್ಕೆ ಆಗುತ್ತಾರೆ. ಚುನಾವಣೆಯಲ್ಲಿ ಯಾರಿಗೆ ಮತ ನೀಡಿದರೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಂಡು ಮತ ಚಲಾಯಿಸಿ. ಜನರ ಹೆಗಲ ಮೇಲೆ ಕೈಹಾಕಿ ಗಿಲಿಟ್ ಮಾಡುವ ರಾಜಕಾರಣಿ ನಾನಲ್ಲ. ಸಮುದಾಯ ಭವನ, ಹೈಸ್ಕೂಲ್, ಪಿ.ಯು.ಕಾಲೇಜು, ಡಿಗ್ರಿ ಕಾಲೇಜು, ಮುನ್ಸಿಪಲ್ ಕಟ್ಟಡ ಕಟ್ಟಿಸಿದ್ದೇನೆ. ಉಪಕಾರ ಮಾಡಿದವರನ್ನು ಮರೆಯಬಾರದೆಂದು ಎಲ್ಲಾ ಕಡೆ ಕೆಲಸ ಮಾಡಿಸುತ್ತಿದ್ದೇನೆ. 367 ಕೋಟಿ ರೂ.ಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಕೊಡುತ್ತೇನೆ. ಭದ್ರಾ ಪ್ರಾಜೆಕ್ಟ್ನಿಂದ ನೀರು ತಂದು ಇನ್ನು ಆರು ತಿಂಗಳೊಳಗೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು. ರೈತರು ಅಡಿಕೆ ತೋಟಗಳನ್ನು ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್ಗಳನ್ನು ಬಿಟ್ಟಿದ್ದೇನೆ. ಡ್ರೈವರ್, ಕಂಡಕ್ಟರ್ಗೆ ಸಂಬಳ ಕೊಡುತ್ತೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಕೆಲಸ ಮಾಡಿಲ್ಲ ಎಂದು ಹೇಳಿದರು.
ಅಂಕಳಪ್ಪ, ವೈ.ಪರಮೇಶ್ವರಪ್ಪ, ಪ್ರವೀಣ್, ಜಯಪ್ಪ, ನಾಗಲಿಂಗಪ್ಪ, ಎಲೆರಾಜಪ್ಪ, ರಾಘಣ್ಣ, ಎಂ.ದಿವಾಕರ್, ನಾಗಣ್ಣ, ಗುತ್ತಿಗೆದಾರ ಸಿದ್ದೇಶ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.