ಉಧಂಪುರ: ಮುಂದಿನ ದಿನಗಳಲ್ಲಿ ಭಾರತ ಎಂದಿಗೂ ಭಯೋತ್ಪಾದನೆಗೆ ಬಲಿಯಾಗುವುದಿಲ್ಲ. ಉಗ್ರ ಶಕ್ತಿಗಳ ವಿರುದ್ಧ ಶಕ್ತಿ ಮತ್ತು ಕಾರ್ಯ ತಂತ್ರಗಳ ಮೂಲಕ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉಧಂಪುರ ಉತ್ತರ ಕಮಾಂಡ್‌ನಲ್ಲಿ ಸೈನಿಕರ ಜೊತೆಗೆ ಸಂವಾದ ನಡೆಸಿದ ಅವರು ಉಗ್ರವಾದದ ವಿರುದ್ದ ಭಾರತದ ಬಲವಾದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪಾಕ್ ಮತ್ತು ಪಿಒಕೆಯಲ್ಲಿ ಉಗ್ರರ ಮೂಲಸೌಕರ್ಯಗಳನ್ನು ನಾಶ ಮಾಡುವ ಕಾರ್ಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸಮನ್ವಯತೆ, ನಿಖರತೆ ಮತ್ತು ಧೈರ್ಯವನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ. ಉಗ್ರವಾದದ ಬಗ್ಗೆ ಭಾರತದ ನೀತಿಯಲ್ಲಿನ ಬದಲಾವಣೆ ಯೋಧರ ಶೌರ್ಯ, ಸಮರ್ಪಣೆಯ ಪರಿಣಾಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಬಗೆಗೂ ಮಾತನಾಡಿದ ಅವರು, ಈ ಸಂಗತಿ ಗಡಿಯಾಚೆಗಿನ ಉಗ್ರರು ಮತ್ತು ಅವರನ್ನು ಬೆಂಬಲಿಸುವ ಎಲ್ಲರಿಗೂ ಎಚ್ಚರಿಕೆಯಾಗಿದೆ. ಭಾರತ ಇನ್ನು ಮುಂದೆ ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಏಕತೆ – ಸಮಗ್ರತೆಗೆ ಧಕ್ಕೆ, ಹಾನಿಯಾದರೆ ಸೂಕ್ತ ಉತ್ತರವನ್ನು ನೀಡಲು ನಾವು ನೀಡುತ್ತೇವೆ ಎಂದು ಅವರು ನುಡಿದಿದ್ದಾರೆ.
ಆಪರೇಷನ್ ಸಿಂಧೂರ ಮುಗಿದಿಲ್ಲ. ಇದು ಕೇವಲ ವಿರಾಮ ಎಂದು ನೆರೆಯ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.
ಹಾಗೆಯೇ ಸೈನಿಕರ ಆರೋಗ್ಯ, ಸದೃಢತೆಯ ಬಗೆಗೂ ಮಾತನಾಡಿರುವ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದ್ದಾರೆ. ಸೈನಿಕರು ಬಲಿಷ್ಠವಾಗಿದ್ದರೆ ದೇಶದ ಗಡಿಗಳು ಬಲಿಷ್ಠವಾಗಿರುತ್ತವೆ. ಹಾಗಿದ್ದಲ್ಲಿ ಮಾತ್ರ ಭಾರತ ಬಲಿಷ್ಠವಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
				 
         
         
         
															 
                     
                     
                    


































 
    
    
        