ಬೆಂಗಳೂರು : ಸಿದ್ದರಾಮಯ್ಯನವರ ಸರಕಾರವು ಒಳ ಮೀಸಲಾತಿ ಜಾರಿಗೊಳಿಸದೆ ಇರುವ ಹುನ್ನಾರ ನಡೆಸಿದಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರವು ಮಾಧುಸ್ವಾಮಿ ಅವರ ಸಮಿತಿ ರಚಿಸಿ ಒಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿತ್ತು. ಅದನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಮಾಡದೆ ಇದ್ದಲ್ಲಿ ಆಗಸ್ಟ್ 1ರಿಂದ ನಾವು ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತೇವೆ. ರಾಜ್ಯ ಸರಕಾರದ ವಿರುದ್ಧ ಅಸಹಕಾರ ಚಳವಳಿ ಮಾಡಲು ತಯಾರಿದ್ದೇವೆ ಎಂದು ಎಚ್ಚರಿಸಿದರು. ಅಸ್ಪಶ್ಯರು ತಮ್ಮ ಬದುಕಿಗಾಗಿ- ಉಳಿವಿಗಾಗಿ ದೊಡ್ಡ ಆಂದೋಲನ ಮಾಡಲು ಸಿದ್ಧರಿದ್ದೇವೆ ಎಂದು ಪ್ರಕಟಿಸಿದರು. ಇದೇ 31ರೊಳಗೆ ಜಾರಿ ಆಗದಿದ್ದರೆ 30 ಜಿಲ್ಲೆಗಳಲ್ಲೂ ಅಸಹಕಾರ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುವುದಾಗಿ ಹೇಳಿದರು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬದ್ಧತೆ ಇದ್ದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ ಮೀಸಲಾತಿ ಜಾರಿ ಮಾಡಿ ಎಂದು ಒತ್ತಾಯಿಸಿದರು. 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದ ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರ, ತೆಲಂಗಾಣ, ಹರಿಯಾಣ ಮೊದಲಾದೆಡೆ ಈಗಾಗಲೇ ಒಳ ಮೀಸಲಾತಿ ಜಾರಿ ಮಾಡಿ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆದರೆ, ಕರ್ನಾಟಕ ಸರಕಾರವು ಒಂದು ವರ್ಷವಾದರೂ ಒಳ ಮೀಸಲಾತಿ ಆದೇಶ ಜಾರಿ ಮಾಡದೆ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಗಿಮಿಕ್ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ದತ್ತಾಂಶ ಇಲ್ಲ; ಇನ್ನೊಮ್ಮೆ ಸರ್ವೇ ಮಾಡಿಸುತ್ತೇವೆ. 40 ದಿನಗಳಲ್ಲಿ ಮಾಡಿ ಕೊಡುವುದಾಗಿ 4 ತಿಂಗಳ ಹಿಂದೆಯೇ ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಗೊಂದಲ ಸೃಷ್ಟಿ ಮಾಡಲೆಂದೇ ಈ ಸಮಿತಿ ರಚಿಸಿದ್ದಾರೆ ಎಂದು ಆರೋಪಿಸಿದರು.
ಇದೀಗ ಮಾಧ್ಯಮಗಳಲ್ಲಿ ಸರ್ವೇ ಸರಿಯಾಗಿಲ್ಲ ಎಂಬ ವರದಿಗಳನ್ನು ನೋಡುತ್ತಿದ್ದೇವೆ. ಈ ಸರಕಾರ ಗೊಂದಲ ಸೃಷ್ಟಿಸಿ ಒಳ ಮೀಸಲಾತಿ ಮಾಡದೆ ಇರುವ ಹುನ್ನಾರ ಸೃಷ್ಟಿಸುತ್ತಿದೆ ಎಂಬ ಆತಂಕ ನಿರ್ಮಾಣವಾಗಿದೆ.