ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಮೇಕೇನಹಟ್ಟಿ ಗೊಲ್ಲರಹಟ್ಟಿಯಲ್ಲಿ ಮೌಡ್ಯ ಪದ್ಧತಿ ಮತ್ತು ಆಚರಣೆ ಕುರಿತು ಹಾಗೂ ಋತುಸ್ರಾವ ನೈರ್ಮಲ್ಯ ನಿರ್ವಹಣೆ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಜೆಂಡರ್ ಸ್ಪೆಷಲಿಸ್ಟ್ ಡಿ.ಗೀತಾ ಅವರು ಗೊಲ್ಲರಹಟ್ಟಿಗಳಲ್ಲಿ ತಿಂಗಳ ರಜೆ ಮತ್ತು ಬಾಣಂತಿ ಇರುವ ಸಮಯದಲ್ಲಿ ಇಲ್ಲಿನ ಹೆಣ್ಣು ಮಕ್ಕಳು ಮನೆಯನ್ನು ತೊರೆದು ಊರಿನ ಆಚೆ ಗುಡಿಸಿಲಿನಲ್ಲಿ ಇರುವ ಪದ್ಧತಿ ಇದ್ದು, ಈ ಸಮಯದಲ್ಲಿ ಅವರಿಗೆ ಋತುಚಕ್ರ, ಋತುಸ್ರಾವ ಮತ್ತು ಮುಟ್ಟಿನ ನೈರ್ಮಲ್ಯ ಇವುಗಳ ಬಗ್ಗೆ ಹಾಗೂ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮತ್ತು ಸ್ಯಾನಿಟರಿ ಪ್ಯಾಡ್‍ಗಳ ಉಪಯೋಗ ಅದರ ಬಳಕೆ ಇವುಗಳ ಬಗ್ಗೆ ಮಾಹಿತಿ ನೀಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ 181, ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಂದ ಗೊಲ್ಲರಹಟ್ಟಿಯ ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಣ್ಣ, ಶಾಲೆಯ ಮುಖ್ಯ ಶಿಕ್ಷಕ ದಯಾಕರಾ, ಹಿರಿಯ ಆರೋಗ್ಯ ಸಹಾಯಕಿ ಶಿಲ್ಪ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶೋಭಾ, ಮಹಿಳಾ ಮೇಲ್ವಿಚಾರಕಿ ರುಕ್ಕಿಬಾಯಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮಹಿಳೆಯರು ಇದ್ದರು.