ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಸೇರಿದಂತ ಕರ್ನಾಟಕ ಪ್ರತಿನಿಧಿಸುವ ಎಲ್ಲ ಸಚಿವರು ಹಾಗೂ ಸಂಸತ್ ಸದಸ್ಯರಿಗೆ ಪತ್ರ ಬರೆಯಲಾಗಿದೆ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಅನುದಾನದ ಕೊರತೆಯಿಂದಾಗಿ್ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಬಜೆಟ್ ನಲ್ಲಿ ಘೋಷಿಸಿದ 5300 ಕೋಟಿ ರು ಅನುದಾನವ ಕೇಂದ್ರ ಸರ್ಕಾರ ನೀಡುತ್ತಿಲ್ಲ, ಕೇಂದ್ರದತ್ತ ಬೊಟ್ಟು ಮಾಡಿ ರಾಜ್ಯ ಸರ್ಕಾರ ತಾನೂ ಅನುದಾನ ವ್ಯಯಮಾಡುತ್ತಿಲ್ಲ. ಹಾಗಾಗಿ ಯೋಜನೆ ಬಸವಳಿದಿದೆ. ದಿನ ದಿನಕ್ಕೆ ಯೋಜನಾ ವೆಚ್ಚ ದ್ವಿಗುಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತುಂಗಾ ಮತ್ತು ಭದ್ರಾ ಜಲಾಶಯದಿಂದ ಒಟ್ಟು 29.90 ಟಿಎಂಸಿ ನೀರು ಬಳಕೆ ಮಾಡಿಕೊಂಡು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರು ಪ್ರದೇಶಕ್ಕೆ ಮೈಕ್ರೋ ಇರಿಗೇಷನ್ ಮೂಲಕನೀರಾವರಿಕಲ್ಪಿಸುವ ಹಾಗೂ 367 ಕೆರೆಗಳ ತುಂಬಿಸುವ ಯೋಜನೆ ಅಂತರ್ಜಲ ಹೆಚ್ಚಿಸುವ ಯೋಜನೆ ಇದಾಗಿದೆ .ಕರ್ನಾಟಕ ಸರ್ಕಾರ 21,473 ಕೋಟಿ ರುಪಾಯಿಗೆ ಪರಿಷ್ಕೃ ತ ಡಿಪಿಆರ್ ತಯಾರಿಸಿ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿಸುವ ನಿಟ್ಟಿನಲ್ಲಿ 15-2-2022 ರಂದು ನಡೆದ ಕೇಂದ್ರದ 14 ನೇ ಹೈಪವರ್ ಸ್ಕ್ರೀನಿಂಗ ಕಮಿಟಿ ಸಭೆ ಶಿಫಾರಸು ಮಾಡಿತು. ನಂತರ 12-10-2022 ನಡೆದ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಸಾರ್ವಜನಿಕ ಹೂಡಿಕೆ ಮಂಡಳೆ ಸಭೆ 5300 ಕೋಟಿ ನೆರವು ನೀಡಲು ತೀರ್ಮನಿಸಿ ರಾಷ್ಟ್ರೀಯ ಯೋಜನೆಗೆ ಸೇರಿಸಲು ಶಿಪಾರಸು ಮಾಡಿತು ಎಂದು ಸಮಿತಿ ಪ್ರಧಾನಿಗೆ ಬರೆದ ಪತ್ರದಲ್ಲಿ ಹಳೆಯದ ನೆನಪು ಮಾಡಿದೆ.
ನಂತರದ ಬೆಳವಣಿಗೆಯಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು 5300 ಕೋಟಿ ರು ಘೋಷಿಸಲಾಗಿದೆ. ನಂತರದಲ್ಲಿ ಎರಡು ಬಜೆಟ್ ಮಂಡನೆಯಾದರೂ ಇದುವರೆಗೂ 5300 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗದೇ ಇರುವುದು ಈ ಭಾಗದ ರೈತರಲ್ಲಿ ಅಸಮಧಾನ ಮೂಡಿಸಿದೆ.
ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ವ್ಯಾಪ್ತಿಯ ರೈತರು ಕಳೆದ ಐದು ದಶಕಗಳಿಂದ ಭದ್ರಾ ಮೇಲ್ದಂಡೆಗೆ ಹೋರಾಟ ನಡೆಸಿಕೊಂಡು ಬಂದು ಹಲವು ಸರ್ಕಾರಗಳ ಮುಂದೆ ನೀರಾವರಿ ಕಲ್ಪಿಸುವಂತೆ ಕೋರಿದ್ದರ ಪರಿಣಾಮ ಕರ್ನಾಟಕ ಸರ್ಕಾರ ಜಾರಿಗೊಳಿಸಲು ಮುಂದಾಗಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಈ ಪ್ರದೇಶದಲ್ಲಿನ ಮಣ್ಣು ಫಲವತ್ತಾಗಿದ್ದರೂ , ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಮತ್ತು ಶಿರಾ ತಾಲೂಕುಗಳಲ್ಲಿ ಅಂತರ್ಜಲ ಕುಸಿತದಿಂದಾಗೆ ಪ್ಲೋರೈಡ್ ಅಂಶದ ನೀರನ್ನು ಅಲ್ಲಿನ ಜನ ಕುಡಿಯುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಬಜೆಟ್ ಘೋಷಣೆಯಂತೆ 5300 ಕೋಟಿ ರು ನೆರವು ನೀಡಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಸಹಾಯ ಮಾಡಬೇಕು. ಪ್ರಧಾನ ಮಂತ್ರಿ ಕಿಸಾನ್ ಸಂಚಯಿನಿ ಯೋಜನೆಯಡಿಯಾದರೂ ಅನುದಾನ ಬಿಡುಗಡೆ ಮಾಡಬೇಕು ಎಂದು ವಿನಂತಿಸಲಾಗಿದೆ.
ಕೇಂದ್ರ ಸಚಿವರುಗಳಾದ ಸಚಿವೆ ನಿರ್ಮಲಾ ಸೀತರಾಮನ್, ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭೆ ಸದಸ್ಯ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಎಲ್ಲ ಸಂಸದರುಗಳಿಗೆ ಪತ್ರ ಬರೆದು ಭದ್ರಾ ಮೇಲ್ದಂಡೆಗೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸರ್ವೋದಯ ಕರ್ನಾಟಕ ಸಂಘಟನೆ ಮುಖಂಡ ಜೆ.ಯಾದವರೆಡ್ಡಿ, ರೈತ ಸಂಘದ ಕರಿಬಸಪ್ಪ,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.