ನವದೆಹಲಿ : ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಳೆಯ ವಾಹನಗಳಿಗೆ ಇಂಧನ ನಿಷೇಧಿಸಿ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗಿದೆ.
ಹಳೆಯ ವಾಹನಗಳಿಗೆ ಇಂಧನ ನಿಷೇಧಿಸುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಯೋಜನೆಯಲ್ಲಿ ತಾಂತ್ರಿಕ ಸಮಸ್ಯೆ ಕಾರಣ ನೀಡಿ ಹಳೆಯ ವಾಹನಗಳ ಮೇಲಿನ ಇಂಧನ ನಿಷೇಧ ಆದೇಶವನ್ನು ವಾಪಸ್ ಪಡೆದಿದೆ. ಹಳೆಯ ವಾಹನಗಳ ಮೇಲಿನ ಇಂಧನ ನಿಷೇಧವನ್ನು ತೆಗೆದುಹಾಕುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಪತ್ರ ಬರೆದಿದೆ.
ಈ ಪತ್ರದಲ್ಲಿ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆ ಕ್ಯಾಮೆರಾಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದೆ ಹಾಗೂ ಸ್ಪೀಕರ್ ಕಾರ್ಯನಿರ್ವಹಿಸದಿರುವಂತಹ ಮುಂತಾದ ಸಮಸ್ಯೆಗಳಿವೆ. ಇನ್ನೂ ನೆರೆಯ ರಾಜ್ಯಗಳ ಪೆಟ್ರೋಲ್ ಪಂಪ್ಗಳಲ್ಲಿ ಎಎನ್ಪಿಆರ್ ವ್ಯವಸ್ಥೆಯನ್ನು ಜಾರಿಗೆ ತಂದಿಲ್ಲ. ಹೀಗಾಗಿ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಗಳಿಂದ ಹಳೆಯ ವಾಹನಗಳ ಮೇಲಿನ ಇಂಧನ ನಿಷೇಧವನ್ನು ತೆಗೆದುಹಾಕುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಸರ್ಕಾರದ ಪತ್ರದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರದ ದೃಢ ನಿರ್ಧಾರದಿಂದಾಗಿ 10 ವರ್ಷಕ್ಕಿಂತ ಹಳೆಯದಾದ (ಡೀಸೆಲ್) ಮತ್ತು 15 ವರ್ಷ ಹಳೆಯದಾದ (ಪೆಟ್ರೋಲ್) ವಾಹನಗಳಿಗೆ ದೆಹಲಿಯ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ಹಾಕಿಸಬಹುದು. ಪೆಟ್ರೋಲ್ ಪಂಪ್ಗಳು ಇನ್ನು ಮುಂದೆ ಹಳೆಯ ವಾಹನಗಳನ್ನು ಅವುಗಳ ವರ್ಷದ ಆಧಾರದ ಮೇಲೆ ಸೇವೆಯನ್ನು ನಿರಾಕರಿಸುವಂತಿಲ್ಲ. ಪಂಪ್ಗಳಲ್ಲಿರುವ ಕ್ಯಾಮೆರಾಗಳು ದಾಖಲೆಗಾಗಿ ಕಾರ್ಯನಿರ್ವಹಿಸಿದರೂ, ಈ ಹಿಂದೆ ಘೋಷಿಸಲಾಗಿದ್ದ ಇಂಧನ ನಿಷೇಧವನ್ನು ಜಾರಿಗೊಳಿಸುವಂತಿಲ್ಲ ಎಂದು ಹೇಳಿದೆ.