ನವದೆಹಲಿ :ಮಾನಸಿಕ ಖಿನ್ನತೆ ಸಮಸ್ಯೆಯಿಂದ ಬಳಲಿದ್ದ ಯುವಕ ಕೆಲವೇ ವರ್ಷಗಳಲ್ಲಿ ಯುಪಿಎಸ್ ಸಿ ಅಂತಹ ಕಠಿಣ ಪರೀಕ್ಷೆಯಲ್ಲಿ ಯಶಸ್ವಿಯಾದ ಇವರ ಕಥೆ ಹಲವರಿಗೆ ನಿಜಕ್ಕೂ ಸ್ಪೂರ್ತಿದಾಯಕ.
ಐಎಎಸ್ ಮನುಜ್ ಜಿಂದಾಲ್ ಅವರು ಗಾಜಿಯಾಬಾದ್ ಜಿಲ್ಲೆಯ ಹಳ್ಳಿಯವರು. ಅವರ ಆರಂಭಿಕ ಶಾಲಾ ಶಿಕ್ಷಣವನ್ನು ಹಳ್ಳಿಯಲ್ಲೇ ಪೂರೈಸಿದ್ದಾರೆ. 2005ರಲ್ಲಿ 12ನೇ ತರಗತಿ ತೇರ್ಗಡೆಯಾದ ನಂತರ, ಮನುಜ್ ಜಿಂದಾಲ್ ಎನ್ ಡಿಎಗೆ (ಸೇನಾ ತರಬೇತಿ) ಆಯ್ಕೆಯಾದರು. ಎನ್ ಡಿಎಯಲ್ಲಿ ಮೊದಲ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಎರಡನೇ ಅವಧಿ ಬರುವ ವೇಳೆಗೆ ಅವರನ್ನು ಖಿನ್ನತೆ ಆವರಿಸಿತ್ತು.
ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರಿಗೆ ತರಬೇತಿ ನೀಡಲು ಕಷ್ಟವಾಯಿತು. ಅಕಾಡೆಮಿಯಲ್ಲಿ ಮಾನಸಿಕವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಮಾನಸಿಕ ಸಮಸ್ಯೆಯಿಂದ ಮನುಜ್ ಜಿಂದಾಲ್ ತರಬೇತಿಯನ್ನು ಸರಿಯಾಗಿ ಪೂರೈಸಲು ಸಾಧ್ಯವಾಗಲಿಲ್ಲ.
ಖಿನ್ನತೆಯ ಸಮಸ್ಯೆ ಎಷ್ಟು ಗಂಭೀರವಾಯಿತು ಎಂದರೆ ಎನ್ ಡಿಎ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಮೂರ್ನಾಲ್ಕು ತಿಂಗಳು ಅಲ್ಲಿ ಚಿಕಿತ್ಸೆ ನಡೆಯಿತು. ಅಂತಿಮವಾಗಿ ಅಕಾಡೆಮಿ ಅವರನ್ನು ವಜಾಗೊಳಿಸಿತು. ನಂತರ ಅವರ ಪೋಷಕರು ಮತ್ತು ಸಹೋದರ ಅವರನ್ನು ನಿಭಾಯಿಸುವಲ್ಲಿ ಸಾಕಷ್ಟು ಶ್ರಮವಹಿಸಿದರು. ಕ್ರಮೇಣ ಪರಿಸ್ಥಿತಿ ಸುಧಾರಿಸಿತು.
ಖಿನ್ನತೆಯಿಂದ ಹೊರಬಂದ ನಂತರ, ಅವರು ಮುಂದಿನ ಅಧ್ಯಯನದ ಬಗ್ಗೆ ಯೋಚಿಸಿದರು. ಭಾರತದ ಹೊರತಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೂ ಅರ್ಜಿ ಸಲ್ಲಿಸಬಹುದು ಎಂದು ಆತನ ಸ್ನೇಹಿತರು ಸಲಹೆ ನೀಡಿದರು. ಮನುಜ್ ಗೆ ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಓದುವ ಅವಕಾಶ ಸಿಕ್ಕಿತು.
ವರ್ಜೀನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ, ಅವರು ಬಾರ್ಕ್ಲೇಸ್ ನಲ್ಲಿ ಕೆಲಸ ಪಡೆದರು. ಇಲ್ಲಿ ಅವರು ಮೂರು ವರ್ಷಗಳ ಕಾಲ ಉತ್ತಮ ಸಂಬಳದ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ಭಾರತಕ್ಕೆ ಬಂದಾಗ, ಅವರ ಕಿರಿಯ ಸಹೋದರ ಯುಪಿಎಸ್ ಸಿ ಗೆ ತಯಾರಿ ನಡೆಸುತ್ತಿದ್ದರು.
ಮನುಜ್ ಗೂ ಭಾರತಕ್ಕೆ ಹಿಂತಿರುಗಿ ಅರ್ಥಪೂರ್ಣ ಕೆಲಸವನ್ನು ಮಾಡಬೇಕೆಂದು ಅನಿಸಿತು. ಆಗ ಅವರೂ ಯುಪಿಎಸ್ ಸಿ ತಯಾರಿ ಪ್ರಾರಂಭಿಸಿದರು. 2014 ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆಯಲ್ಲಿ ಕಾಣಿಸಿಕೊಂಡರು. ಸಂದರ್ಶನ ಹಂತದಲ್ಲಿ ವಿಫಲರಾದರು.ಎರಡನೇ ಪ್ರಯತ್ನದಲ್ಲೂ ಅವರು ಸಂದರ್ಶನದವರೆಗೂ ಹೋದರೂ ಯಶಸ್ಸಿಯಾಗಲಿಲ್ಲ. 2017 ರಲ್ಲಿ, ಅವರು ಮೂರನೇ ಬಾರಿಗೆ UPAC ಪರೀಕ್ಷೆಯನ್ನು ನೀಡಿದರು. ಈ ಬಾರಿ ಅಖಿಲ ಭಾರತ 52ನೇ ರ್ಯಾಂಕ್ ಪಡೆದರು. ಈಗ ಅವರು ಮಹಾರಾಷ್ಟ್ರ ಕೇಡರ್ ನ ಐಎಎಸ್ ಅಧಿಕಾರಿ ಆಗಿದ್ದಾರೆ.