ಮುಂಬೈ : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 400 ಕ್ಕೂ ಅಧಿಕ ರನ್ ಕಲೆ ಹಾಕಿದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಇದೀಗ ಐಸಿಸಿ ಹೊಸ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆದುಕೊಂಡಿದ್ದಾರೆ.
ನೂತನ ರ್‍ಯಾಕಿಂಗ್‌ನಲ್ಲಿ 15 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿರುವ ಶುಭಮನ್ ಗಿಲ್ ಆರನೇ ಸ್ಥಾನಕ್ಕೆ ಬಂದಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ 21 ನೇ ಸ್ಥಾನದಲ್ಲಿದ್ದ ಶುಭ್‌ಮನ್ ಗಿಲ್ ಇದೀಗ ಎರಡನೇ ಟೆಸ್ಟ್ ನಂತರ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಉಳಿದಂತೆ ಇಂಗ್ಲೆಂಡ್ ತಂಡದ ಉಪನಾಯಕ ಹ್ಯಾರಿ ಬ್ರೂಕ್ ನಂಬರ್ 1 ಸ್ಥಾನವನ್ನು ಅಲಂಕರಿಸಿಕೊಂಡಿದ್ದರೆ, ಜೋ ರೂಟ್ ನಂಬರ್ 1 ರಿಂದ ನಂಬರ್ 2 ಸ್ಥಾನಕ್ಕೆ ಕುಸಿದಿದ್ದಾರೆ.
ಶುಭ್‌ಮನ್ ಗಿಲ್ ಇಂಗ್ಲೆಂಡ್ ಪ್ರವಾಸಕ್ಕೆ ಬಂದಾಗ, ವಿಮರ್ಶಕರು ಅವರ ತಂತ್ರವನ್ನು ಪ್ರಶ್ನಿಸುತ್ತಿದ್ದರು. ಆದರೆ ಮೊದಲ ಟೆಸ್ಟ್‌ನಲ್ಲಿಯೇ ಗಿಲ್ ಶತಕ ಗಳಿಸುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದರು. ಆದಾಗ್ಯೂ ಭಾರತ ಆ ಟೆಸ್ಟ್‌ನಲ್ಲಿ ಸೋಲನುಭವಿಸಿತು. ಇದರ ನಂತರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬರೋಬ್ಬರಿ 430 ರನ್ ಬಾರಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ, 807 ರೇಟಿಂಗ್ ಪಾಯಿಂಟ್ ಪಡೆದಿರುವ ಶುಭ್‌ಮನ್ ಗಿಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ.