ಚಿತ್ರದುರ್ಗ: ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪು ಆಯ್ಕೆ ಮಾಡಲು ಚಿತ್ರದುರ್ಗ ನಗರದ ರುಡ್ಸೆಟ್ ಸಂಸ್ಥೆಯಲ್ಲಿ ಗುರುವಾರ ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಕಟ್ಟಡದ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, ಈ ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪನ್ನು ಆಯ್ಕೆ ಮಾಡಲು ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನುಭವವಿರುವ ಮೂರು ಸ್ವ-ಸಹಾಯ ಗುಂಪುಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸಿ ಆಹಾರ ಸಿದ್ದಪಡಿಸಿರುವ ವಿಧಾನ, ಗುಣಮಟ್ಟ, ರುಚಿ-ಶುಚಿ-ನೈರ್ಮಲ್ಯ, ಆಹಾರ ತಯಾರಿಸಲು ಉಪಯೋಗಿಸಿದ ಪದಾರ್ಥಗಳನ್ನು ಪರಿಶೀಲಿಸಿ, ಸ್ವ-ಸಹಾಯ ಸಂಘದ ಮಹಿಳೆಯರು ಸಿದ್ಧಪಡಿಸಿದ ಆಹಾರದ ರುಚಿ, ಗುಣಮಟ್ಟ ಪರಿಶೀಲನೆ ನಡೆಸಿದರು.
ಅಕ್ಕ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪಿನ ಆಯ್ಕೆಯಲ್ಲಿ ಶುಚಿ-ರುಚಿ ಆಹಾರಕ್ಕೆ ಒತ್ತು ನೀಡಬೇಕು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ನಂದಿನಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ, ರುಡ್ಸೆಟ್ ಸಂಸ್ಥೆ ನಿರ್ದೇಶಕ ಬಸವರಾಜ್, ಎನ್ಆರ್ಎಲ್ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್ ಇದ್ದರು.