ಉಡುಪಿ: ಹಲವಾರು ಕ್ರಿಮಿನಲ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಯಾನೆ ಕಬೀರ್ ಹುಸೇನ್(46) ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದು, ಅದರಂತೆ ಆತನನ್ನು ಬಂಧಿಸಿ ಮೈಸೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಈತನ ಮೇಲೆ ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ, ಕಾಪು ಠಾಣೆಗಳ ವ್ಯಾಪ್ತಿಯಲ್ಲಿ 2005 ರಿಂದೀಚೆಗೆ ನಡೆದ ಹಲವಾರು ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮತ್ತಿತರ 17 ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಠಾಣೆಯ ಪ್ರಕರಣಗಳಲ್ಲೂ ಭಾಗಿಯಾಗಿರುತ್ತಾನೆ. ಈತನು ಗರುಡ ಗ್ಯಾಂಗನ ಸಕ್ರಿಯ ಸದಸ್ಯನಾಗಿರುತ್ತಾನೆ. ಈತನ ಮೇಲಿರುವ ಕೇಸುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಸಜೆ ಹೊಂದಿದ್ದು, 8 ಪ್ರಕರಣಗಳಲ್ಲಿ ಖುಲಾಸೆ ಹೊಂದಿರುತ್ತಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಉಳಿದ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿವೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.