ಯಾವುದೇ ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಫೈಟ್ ಮತ್ತು ಫೈನ್ ಆಗಿರಬೇಕು. ಅದರಲ್ಲೂ ದೈಹಿಕ ಫಿಟ್ನೆಸ್ ತುಂಬಾ ಮುಖ್ಯ.
ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು , ದೇಹಕ್ಕೆ ವ್ಯಾಯಾಮದ ಕೊರತೆ ಇನ್ನಿತರ ಕಾರಣಗಳಿಗಾಗಿ ಹೊಟ್ಟೆಯ ಬೊಜ್ಜು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಮಂದಿ ಇಂತಹ ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪೊಲೀಸರ ಹೊಟ್ಟೆ ಬೊಜ್ಜಿನ ಸಮಸ್ಯೆ ಪರಿಹಾರಕ್ಕಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ 30ದಿನದ ನವಚೇತನ ಶಿಬಿರ ಆಯೋಜಿಸಿದ್ದಾರೆ. ಧಡೂತಿ ದೇಹ, ಹೊಟ್ಟೆಯ ಬೊಜ್ಜು ಸಮಸ್ಯೆ ಹೊಂದಿರುವ ಜಿಲ್ಲೆಯ 62 ಪುರುಷರು ಮತ್ತು 9 ಮಹಿಳಾ ಪೊಲೀಸರು ಸೇರಿ ಒಟ್ಟು 71 ಮಂದಿ ಪೊಲೀಸರಿಗೆ ಮಣಿಪಾಲದ ಪರೀಕದಲ್ಲಿ ವಿಶೇಷ ಶಿಬಿರ ನಡೆಸಲಾಗುತ್ತಿದ್ದು, ಪೊಲೀಸರು ಮಳೆಗಾಲದಲ್ಲೂ ಬೆವರು ಹರಿಸುತ್ತಿದ್ದಾರೆ.
ಶಿಬಿರದಲ್ಲಿ ವ್ಯಾಯಾಮ, ನಿದ್ರೆ ಆಹಾರಕ್ರಮ ಇನ್ನಿತರ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಕೆಲವರು ಗಣನೀಯ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ.
ಪೊಲೀಸರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸಲು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಕೈಗೊಂಡ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.