ಧರ್ಮಸ್ಥಳ ಗ್ರಾಮದ ಸುತ್ತ ಮುತ್ತ ನೂರಕ್ಕೂ ಅಧಿಕ ಅನಾಥ ಶವಗಳನ್ನು ಹೂತು ಹಾಕಿರುವುದಾಗಿ ನ್ಯಾಯವಾದಿಗಳ ಮೂಲಕ ಇತ್ತೀಚೆಗೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.11ರಂದು ಶುಕ್ರವಾರ ತಮ್ಮ ಪರ ನ್ಯಾಯವಾದಿಗಳ ಸಮ್ಮುಖದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಶುಕ್ರವಾರ ಸಂಜೆ ಸಂಪೂರ್ಣ ಮುಸುಕುದಾರಿಯಾಗಿ ತಮ್ಮ ಪರ ನ್ಯಾಯವಾದಿಗಳ ಮೂಲಕ ಪೊಲೀಸ್ ಬಂದೋಬಸ್ತಿನೊಂದಿಗೆ ವಾಹನದಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ.
ಕೃತ್ಯ ಎಸಗಿರುವ ವಿಚಾರವಾಗಿ ತಾನು ಹೂತುಹಾಕಿದ್ದ ಸ್ಥಳವೊಂದರಿಂದ ಈಗಾಗಲೆ ತೆಗೆದಿದ್ದ ಮೃತದೇಹದ ಕೆಲ ವಸ್ತುಗಳ ಸಮೇತ ಸಾಕ್ಷಿಯನ್ನು ಬ್ಯಾಗ್ನಲ್ಲಿರಿಸಿ ನ್ಯಾಯಾಲಯಕ್ಕೆ ಆಗಮಿಸಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಮುಂದೆ ಹೇಳಿಕೆ ನೀಡಿದ್ದಾನೆ.
ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ಪಡೆದ ಬಳಿಕ ಆತನನ್ನು ಬೆಳ್ತಂಗಡಿ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ವ್ಯಕ್ತಿ ತಂದಿದ್ದ ತಲೆಬುರುಡೆಯನ್ನು ವಿಧಿವಿಜ್ಞಾನ ಪ್ರಯೋಗಾಲಾಯದ ಅಧಿಕಾರಿಗಳ ಮುಂದೆ ಪೊಲೀಸ್ ಸಮ್ಮುಖದಲ್ಲಿ ಹಾಜರು ಪಡಿಸಿರುವುದಾಗಿ ತಿಳಿದುಬಂದಿದೆ.
ನ್ಯಾಯಾಲಯಕ್ಕೆ ಹಾಜರಾಗಿರುವ ವ್ಯಕ್ತಿ ತಾನು ಧರ್ಮಸ್ಥಳದ ಸಂಸ್ಥೆಯೊಂದರಲ್ಲಿ 1998ರಿಂದ 2014ರ ವರೆಗೆ ಸ್ವಚ್ಛತಾ ಸಿಬಂದಿಯಾಗಿ ಸೇವೆ ಮಾಡುತ್ತಿದ್ದು, ಈ ಅವಧಿಯಲ್ಲಿ ನೂರಾರು ಶವಗಳನ್ನು ಸ್ಥಳದ ಮೇಲ್ವಿಚಾರಕರ ಸೂಚನೆಯಂತೆ ಗುಂಡಿ ತೋಡಿ ಹೂತು ಹಾಕಿರುವೆ. ತನಗೆ ಜೀವಬೆದರಿಕೆ ಒಡ್ಡುತ್ತಿದ್ದುದರಿಂದ 2014ರಲ್ಲಿ ನಾನು ನನ್ನ ಕುಟುಂಬ ತಲೆಮರೆಸಿಕೊಂಡೆವು ಎಂದಿದ್ದಾರೆ.
ಬಿಎನ್ಎಸ್ಎಸ್ನ ಸೆಕ್ಷನ್ 183 (ಸಿಆರ್ಪಿಸಿಯ ಸೆಕ್ಷನ್ 164) ಅಡಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ದೂರುದಾರರನ್ನು ನ್ಯಾಯಾಲಯವನ್ನು ಕರೆದೊಯ್ಯಲಾಯಿತು. ದೂರುದಾರ ತಾನು ಅನಕ್ಷರಸ್ಥ ಮತ್ತು ನ್ಯಾಯಾಲಯಕ್ಕೆ ಇದುವರೆಗೆ ಹೋಗಿರದಿದ್ದುದರಿಂದ ತನಗೆ ತೊಂದರೆಯಾಗಬಹುದು ಎಂದು ಹೇಳಿಕೆ ನೀಡುವಾಗ ನಮ್ಮಲ್ಲಿ ಒಬ್ಬರು ವಕೀಲರು ನ್ಯಾಯಾಲಯದಲ್ಲಿ ತನ್ನ ಜೊತೆ ಹಾಜರಿರಬೇಕು ಎಂದು ಸೂಚಿಸಿದ್ದರು. ಈ ಕುರಿತು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೆವು. ಆದರೆ, ದೂರುದಾರರ ಜೊತೆ ವಕೀಲರು ಹಾಜರಿರುವುದಕ್ಕೆ ನ್ಯಾಯಾಲಯವು ಒಪ್ಪಲಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ದೂರುದಾರನ ಹೇಳಿಕೆಗಳ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಿತು ಎಂದು ದೂರುದಾರನ ಪರ ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.