ಬೆಂಗಳೂರು: ಕರ್ನಾಟಕದ ಅತಿದೊಡ್ಡ ಹಾಗೂ ದೇಶದ ಎರನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿರುವ ಸಿಗಂದೂರು ಬ್ರಿಡ್ಜ್ ಲೋಕಾರ್ಪಣೆ ವಿಚಾರವಾಗಿ ಉಂಟಾಗಿರುವ ರಾಜಕೀಯ ವಿವಾದ ಈಗ ಮತ್ತಷ್ಟು ಜೋರಾಗುತ್ತಿದೆ.
ಉದ್ಘಾಟನೆ ಕಾರ್ಯಕ್ರಮಕ್ಕೆ ತಮ್ಮನ್ನು ವಿಳಂಬವಾಗಿ ಆಹ್ವಾನಿಸಲಾಗಿದ್ದು, ಪೂರ್ವನಿಗದಿತ ಕಾರ್ಯಕ್ರಮದ ಕಾರಣ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ದಿನಾಂಕ ಮುಂದೂಡಿ ಎಂದು ಮನವಿ ಮಾಡಿದ್ದರು. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿಯೂ ಅಸಮಾಧಾನ ತೋಡಿಕೊಂಡ ಸಿಎಂ, ಕೇಂದ್ರ ಸಚಿವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದರು.
ಈ ಕುರಿತ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಗಂದೂರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದರು.
				
															
                    
                    
                    
                    
                    
































