ಶಿವಮೊಗ್ಗ : ಸಾಗರದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆಯಾದ ಸಿಗಂದೂರು ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಲೋಕಾರ್ಪಣೆಗೊಳಿಸಿದರು.
ಸೇತುವೆ ಲೋಕಾರ್ಪಣೆ ವೇಳೆ ನಡೆದ ಹೋಮದಲ್ಲಿ ಸಚಿವರು ಪಾಲ್ಗೊಂಡರು. ಲೋಕಾರ್ಪಣೆ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಜೊತೆಗಿದ್ದರು.
ದೇವಸ್ಥಾನದಲ್ಲಿ ನವ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿಸಲಾಯಿತು. ಧರ್ಮದರ್ಶಿ ರಾಮಪ್ಪನವರು ಕೇಂದ್ರ ಸಚಿವರಿಗೆ ಸೇತುವೆಯ ಪ್ರತಿಕೃತಿ ನೀಡಿ ಗೌರವಿಸಿದರು. ಇನ್ನು ಸಚಿವರು ಸೇತುವೆ ಲೋಕಾರ್ಪಣೆ ಜೊತೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳ 2,056 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.