ರಾಯ್ಪುರ : ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ರಾಜ್ಯದಲ್ಲಿ ನಡೆದ ಬಹುಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ .
ಶುಕ್ರವಾರ ಬೆಳಗ್ಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ವರ್ಷ ಎರಡನೇ ಬಾರಿಗೆ ಭಿಲಾಯಿಯಲ್ಲಿರುವ ಬಘೇಲ್ ಕುಟುಂಬದ ನಿವಾಸದ ಮೇಲೆ ದಾಳಿ ನಡೆಸಿದರು. ಬಳಿಕ ಬಘೇಲ್ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ರಾಜ್ಯದ ರಾಯ್‌ಗಢ ಜಿಲ್ಲೆಯ ತಮ್ನಾರ್ ತಹಸಿಲ್‌ನಲ್ಲಿ ಅದಾನಿ ಗ್ರೂಪ್‌ನಿಂದ ಕಲ್ಲಿದ್ದಲು ಗಣಿ ಯೋಜನೆಗಾಗಿ ಮರಗಳನ್ನು ಕಡಿಯುತ್ತಿರುವ ವಿಷಯವನ್ನು ಡೈವರ್ಟ್ ಮಾಡಲು ಹೀಗೆ ಮಾಡಲಾಗಿದೆ ಎಂದು ಭೂಪೇಶ್ ಬಘೇಲ್ ಟೀಕಿಸಿದ್ದಾರೆ.
ಚೈತನ್ಯ ಬಂಧನದ ಹಿನ್ನೆಲೆಯಲ್ಲಿ ಬಘೇಲ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆ ವಿಧಾನಸಭಾ ಕಲಾಪಗಳನ್ನು ಬಹಿಷ್ಕರಿಸಿದರು. ‘ಬಘೇಲ್ ಮತ್ತು ನಮ್ಮ ಮೇಲೆ ಕಿರುಕುಳ ನೀಡಲು ಇಡಿ ಮುಂದಾಗಿದೆ.
ಕಾಂಗ್ರೆಸ್ ನಾಯಕ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಮದ್ಯ ಹಗರಣದ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಅವರ ನಿವಾಸದಲ್ಲಿ ಮತ್ತೆ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2019 ಮತ್ತು 2022 ರ ನಡುವೆ ಛತ್ತೀಸ್‌ಗಢದಲ್ಲಿ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳನ್ನು ಒಳಗೊಂಡ ಕಾರ್ಟೆಲ್, ಮದ್ಯ ಮಾರಾಟದಿಂದ ಸುಮಾರು 2,161 ಕೋಟಿ ರೂ.ಗಳನ್ನು ಅಕ್ರಮವಾಗಿ ಸಂಗ್ರಹಿಸುವ ಯೋಜನೆಯನ್ನು ನಡೆಸಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.