ಚಿತ್ರದುರ್ಗ: ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲೋಷಿಪ್ಗೆ ಅರ್ಜಿ ಆಹ್ವಾನಿಸಲಾಗಿದೆ.
ಅಕಾಡೆಮಿಯ ಸಾಮಾನ್ಯ ಆಯವ್ಯಯದಡಿ ಎರಡು, ಮಹಿಳಾ ಆಯವ್ಯಯದಡಿ ಎರಡು ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಂದು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಒಂದು ಫೆಲೋಷಿಪ್ ನೀಡಲಾಗುವುದು. ಫೆಲೋಷಿಪ್ ಅವಧಿ 6 ತಿಂಗಳು. ಕನಿಷ್ಠ ಐದು ವರ್ಷ ಸೇವಾನುಭವ ಹೊಂದಿರುವ, ಕನಿಷ್ಠ 30 ವರ್ಷದಿಂದ 50 ವರ್ಷ ವಯೋಮಿತಿಯ ಪತ್ರಕರ್ತರು ಫೆಲೋಷಿಪ್ಗೆ ಅರ್ಜಿ ಸಲ್ಲಿಸಬಹುದು. ಪತ್ರಕರ್ತರು ಪದವೀಧರರಾಗಿರಬೇಕು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಈ ಕುರಿತು ಸಂಪಾದಕರ ದೃಢೀಕರಣ ಪತ್ರ ಸಲ್ಲಿಸಬೇಕು.
ಫೆಲೋಷಿಪ್ನ ವಿಷಯಗಳು ಇಂತಿವೆ.1. ಬಾಲ್ಯವಿವಾಹ, POCSO, ಮರ್ಯಾದೆಗೇಡು ಹತ್ಯೆ- ಮಾಧ್ಯಮ ದೃಷ್ಟಿಕೋನ, 2. ಕೃಷಿ ಸಂವಹನ- ಒಂದು ಅಧ್ಯಯನ, 3. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ, 4. ಬುಡಕಟ್ಟು ಕಾಯ್ದೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ- ಮಾಧ್ಯಮ ನೋಟ, 5. Role of Media in creating awareness on cybercrime and digital safety (ಇಂಗ್ಲಿಷ್ ನಲ್ಲಿ ಅಧ್ಯಯನ ವರದಿ ಸಲ್ಲಿಸುವುದು), 6. ಮಾಧ್ಯಮ ಶಿಕ್ಷಣ ಮತ್ತು ವೃತ್ತಿ ನಡುವಿನ ಅಂತರ: ಕಾರಣಗಳು, ಪರಿಣಾಮ ಹಾಗೂ ಪರಿಹಾರ
ಫೆಲೋಷಿಪ್ ಅವಧಿ ಆರು ತಿಂಗಳು. ಅರ್ಜಿ ಸ್ವೀಕರಿಸಲು 2 ನೇ ಆಗಸ್ಟ್ 2025 ಕೊನೆಯ ದಿನವಾಗಿದ್ದು, ವಿಜೇತರ ಆಯ್ಕೆಯಲ್ಲಿ ಅಕಾಡೆಮಿಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ಸೈಟ್ mediaacademy.karnataka.gov.in
ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರಕ ದಾಖಲೆಗಳು ಹಾಗೂ ಅಧ್ಯಯನ ಕುರಿತ ಟಿಪ್ಪಣಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ,ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 560001 ಇವರಿಗೆ ಕಳುಹಿಸಬಹುದು ಅಥವಾ [email protected] ಗೆ ಇ – ಮೇಲ್ ಮೂಲಕ ಕಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.