555 ರೂಪಾಯಿ ಮೌಲ್ಯದ ಸಸ್ಯಾಹಾರದ ಬದಲಾಗಿ ಮಾಂಸಾಹಾರ ನೀಡಿದ ಡಾಮಿನೋಸ್ ಪಿಜ್ಜಾ ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಕಿ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ದಾರವಾಡ ವಿದ್ಯಾಗಿರಿಯ ಪ್ರದ್ಯುಮ್ನ ಇನಾಮದಾರ್ ಎಂಬುವವರು, ಪಿಜ್ಜಾಜಾಹೀರಾತು ನೋಡಿ ಸಸ್ಯಹಾರಿ ಪದಾರ್ಥಗಳಾದ ತಂದೂರಿ ಪನೀರ್ ಪಿಜ್ಜಾ, ಪನೀರ್ ಟಿಕ್ಕಾ ಸ್ಟಫ್ಟ್‌ಗಾರ್ಲಿಕ್ ಬ್ರೇಡ್, ವೆಜ್ ಜಿಂಗಿ ಪಾರ್ಸೆಲ್ ಹಾಗೂ ಚೀಸ್‌ಡಿಪ್ ನ್ನು 555 ರೂ.ಪಾವತಿಸಿ ಆರ್ಡರ್ ಮಾಡಿದ್ದರು. ಮನೆಗೆ ಬಂದ ಬಳಿಕ ಸೇವಿಸಿದಾಗ ಅದು ಸಸ್ಯಹಾರಿ ಆಹಾರ ಅಲ್ಲ,ಬದಲಾಗಿ ಮಾಂಸಹಾರಿ ಪದಾರ್ಥ ಅನ್ನುವುದು ಗೊತ್ತಾಗಿದೆ. ವೆಜ್‌ಜಿಂಗಿ ಪಾರ್ಸೆಲ್ ಬಾಕ್ಸ್‌ನ ಮೇಲೆ ಹಸುರು ಸ್ಟೀಕರ್ ಅಂಟಿಸಿದ್ದು, ಆದರೆ ಅದರಲ್ಲಿ ಮಾಂಸಹಾರಿ ಪದಾರ್ಥ ಕಳುಹಿಸಿ ಅದನ್ನು ತಾನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತೆ ಆಗಿದೆ. ಇದಲ್ಲದೆ ತಪ್ಪು ಪಾರ್ಸೆಲ್ ಕಳುಹಿಸಿ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2025 ಜ1. ರಂದು ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಒಳಗೊಂಡ ಆಯೋಗವು, ದಾಖಲೆಗಳನ್ನು ಪರಿಶೀಲಿಸಿದಾಗ ಆರ್ಡರ್ ಮಾಡಿದ್ದ ಪದಾರ್ಥಗಳನ್ನು ಕಳುಹಿಸದೇ ತಪ್ಪಾಗಿ ಮಾಂಸಹಾರ ಪದಾರ್ಥವನ್ನು ಕಳುಹಿಸಿರುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದ ನಿರ್ಲಕ್ಷ್ಯತನದಿಂದ ದೂರುದಾರರು ಮಾಂಸಹಾರವನ್ನು ಸೇವಿಸುವ ಪರಿಸ್ಥಿತಿ ಬಂದಿರುವುದು ಕಂಡುಬರುತ್ತದೆ. ಇದಲ್ಲದೆ ಎದುರುದಾರರು ತಾವು ಹೊರಡಿಸಿದ ಜಾಹೀರಾತು ಹಾಗೂ ಶಿಸ್ತಿನ ಆಹಾರ ಪದಾರ್ಥ ಮತ್ತು ಅದರ ವಿತರಣೆಯ ಅಂಶಗಳನ್ನು ಗಮನದಲ್ಲಿಟ್ಟು ಕೆಲಸ ಮಾಡದೆ ಸೇವಾ ನ್ಯೂನ್ಯತೆ ಎಸಗಿರುವುದ ಕಂಡು ಬಂದಿದೆ ಎಂದು ತೀರ್ಪು ಪ್ರಕಟಿಸಿದೆ. ಈಗ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ 50,000 ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚಕ್ಕೆ 10,000 ಕೊಡುವಂತೆ ಆಯೋಗವು ಡಾಮಿನೋಸ್ ಪಿಜ್ಜಾಗೆ ಆದೇಶಿಸಿದೆ.