ಚಿತ್ರದುರ್ಗ: ದೇಶದ ಸಂಪತ್ತು ಎಂದರೆ ಕಟ್ಟಡಗಳು, ಹಣವೇ, ಅದಿರು ಸಂಪತ್ತು ಎಂದು ಭಾವಿಸಲಾಗಿದೆ, ಅದರೆ ನಮ್ಮ ದೇಶದ ನಿಜವಾದ ಸಂಪತ್ತು ಎಂದರೆ ಪ್ರತಿಭಾವಂತರು ಅವರೇ ನಮ್ಮ ದೇಶದ ನಿಜವಾದ ಸಂಪತ್ತು ಎಂದು ದಾವಣಗೆರೆ ವಿರಕ್ತ ಮಠದ ಪೀಠಾಧ್ಯಕ್ಷರಾದ ಡಾ. ಬಸವ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ನಗರದ ವೀರಶೈವ ಸಮಾಜ(ರಿ)ವತಿಯಿಂದ ಭಾನುವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. 90ಗಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವೀರಶೈವ-ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಪ್ರತಿಭೆ ಯಾರ ಸೊತ್ತು ಅಲ್ಲ, ಅದು ಸಾಧಕರ ಸೊತ್ತು, ಪ್ರತಿಭೆಗೆ ಯಾವುದೇ ಜಾತಿ, ಧರ್ಮ ಇಲ್ಲ, ಸತತ ಅಭ್ಯಾಸ, ಪರಿಶ್ರಮದ ಮೂಲಕ ಪ್ರತಿಭೆಯನ್ನು ಗಳಿಸಬಹುದಾಗಿದೆ. ಪ್ರತಿಭಾವಂತರು ನಮ್ಮ ದೇಶದಲ್ಲಿ ಚನ್ನಾಗಿ ಓದಿ ಉತ್ತಮವಾದ ಅಂಕಗಳನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರ ದೇಶಗಳಿಗೆ ಹೋಗುತ್ತಾರೆ ಆದರೆ ಅಲ್ಲಿಂದ ವಾಪಾಸ್ಸು ಬರುವುದಿಲ್ಲ ಇದರಿಂದ ನಮ್ಮ ದೇಶದ ಪ್ರತಿಭೆ ಬೇರೆ ದೇಶದ ಪಾಲಾಗುತ್ತಿವೆ ಇದರಿಂದ ತಾವು ಕಲಿತ ದೇಶ ಯಾವ ರೀತಿ ಪ್ರಗತಿಯನ್ನು ಹೊಂದಲು ಸಾಧ್ಯ, ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಇರಬೇಕು ಆಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯವಿದೆ ಎಂದರು.
ನಮ್ಮ ದೇಶದಲ್ಲಿ ಕಡಿಮೆ ಸಂಬಳ ಎಂದು ಇಲ್ಲಿಂದ ಬೇರೆ ದೇಶಗಳಿಗೆ ಹೆಚ್ಚಿನ ಸಂಬಳಕ್ಕೆ ಹೋಗುತ್ತಾರೆ ಆದರೆ ಇದು ನಮ್ಮ ದೇಶಕ್ಕೆ ದೊಡ್ಡದಾದ ಅನ್ಯಾಯವಾಗಿದೆ. ನಮ್ಮ ದೇಶದಲ್ಲಿನ ಪ್ರತಿಭಾವಂತರು ಪ್ರಪಂಚದ ಉನ್ನತವಾದ ಸಾಧನೆಯನ್ನು ಮಾಡಿದ್ದಾರೆ ಇಲ್ಲದೆ ಉತ್ತಮವಾದ ಸ್ಥಾನದಲ್ಲಿ ಇದ್ದಾರೆ. ನಮ್ಮ ದೇಶದ ಪ್ರತಿಭಾವಂತರು ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ ಇದರಿಂದ ಪ್ರಪಂಚ ಇಂದು ನಮ್ಮ ದೇಶದ ಕಡೆಯಲ್ಲಿ ತಿರುಗಿ ನೋಡುತ್ತಿದೆ. ವಿದೇಶದಲ್ಲಿ ನೆಲಸಿರುವ ಪ್ರತಿಭಾವಂತರು ನಮ್ಮ ದೇಶದವರಾಗಿದ್ದಾರೆ. ನಮ್ಮ ದೇಶದ ಭಾರತೀಯರು ತಮ್ಮ ಪ್ರತಿಭೆಯ ಮೂಲಕ ವಿಶ್ವದ ಗಮನವನ್ನು ಸೆಳೆಯುತ್ತಿದ್ದಾರೆ. ಇಂದಿನ ನಮ್ಮ ಯುವ ಪ್ರತಿಭೆಗಳು ನಮ್ಮ ದೇಶದವನ್ನು ಬಿಟ್ಟು ಹೋಗದೇ ನಮ್ಮಲ್ಲಿಯೇ ಇದ್ದು ನಮ್ಮ ದೇಶಕ್ಕೆ ಸಮಾಜಕ್ಕೆ ಕೀರ್ತಿಯನ್ನು ತರುವಂತ ಕೆಲಸವನ್ನು ಮಾಡಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.
ನಿಮ್ಮ ಪ್ರತಿಭೆಯನ್ನು ಬರೀ ನಿಮ್ಮ ಸ್ವಾರ್ಥಕ್ಕೆ ಉಪಯೋಗವನ್ನು ಮಾಡಿಕೊಳ್ಳದೆ ಬೇರೆಯವರಿಗೆ ಮಾರ್ಗ ದರ್ಶನವನ್ನು ನೀಡುವಂತ ಕಾರ್ಯವನ್ನು ಮಾಡಬೇಕಿದೆ. ಬಡತನದಲ್ಲಿ ಶಿಕ್ಷಣವನ್ನು ಪಡೆದಯದೇ ಇರುವಂತ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವಂತ ಕಾರ್ಯವನ್ನು ನೀವುಗಳು ಮಾಡಬೇಕಿದೆ. ಈ ವೇದಿಕೆ ಮೇಲೆ ಇರುವವರು ಅಂಕಗಳಲ್ಲಿ ನಂಬರ್ ಒನ್ ಆಗದೆ ಜೀವನದಲ್ಲಿ ನಂಬರ್ ಒನ್ ಆಗಿದ್ದಾರೆ, ಇದೇ ರೀತಿ ನೀವುಗಳ ಸಹಾ ಸಾಧನೆಯನ್ನು ಮಾಡುವುದರ ಮೂಲಕ ಜೀವನದಲ್ಲಿ ನಂಬರ್ ಓನ್ ಆಗಬೇಕಿದೆ. ನಮ್ಮ ಸುತ್ತಾ-ಮುತ್ತಲ್ಲಿನವರನ್ನು ಸಹಾ ಬೆಳೆಸುವಂತ ಕಾರ್ಯವನ್ನು ಮಾಡಬೇಕಿದೆ ನಮ್ಮ ಸಮುದಾಯದವರು ಸಹಾಯ, ಸಹಕಾರ ಮನೋಭಾವದಿಂದ ಎಲ್ಲರನ್ನು ಕರೆದುಕೊಂಡು ಬೆಳಸುವಂತ ಮನೋಭಾವದಿಂದ ಬಾಳ ಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನುವಹಿಸಿದ್ದ ಮತೋರ್ವ ಶ್ರೀಗಳಾದ ಎಸ್.ಜೆ.ಎಂ. ವಿದ್ಯಾಪೀಠ ಮತ್ತು ಶ್ರೀ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಮ್ಮ ಆಶೀರ್ವ ಚನದಲ್ಲಿ ಪ್ರತಿಭೆಗಳು ನಿರ್ಧಿಷ್ಟ ಸಮುದಾಯ ಸೊತ್ತಲ್ಲ, ಯಾವುದೇ ಒಂದು ಸಮುದಾಯದ ಸೊತ್ತು ಅಲ್ಲ, ಅವರು ರಾಷ್ಟ್ರದ ಸೊತ್ತು, ದೇಶದ ಆಸ್ತಿಯಾಗಿದ್ದಾರೆ. ಇಂದಿನ ಪ್ರತಿಭಾವಂತ ಮಕ್ಕಳು ಪುಣ್ಯವಂತರಾಗಿದ್ದಾರೆ ಅವರಿಗೆ ಎಲ್ಲಾ ರೀತಿಯಾದ ಸೌಲಭ್ಯಗಳು ಬೆರಳಿನ ತುದಿಯಲ್ಲಿಯೇ ದೊರಕುತ್ತಿದೆ, ನಿಮ್ಮ ತಂದೆ, ತಾತರವರ ಕಾಲದಲ್ಲಿ ಈ ರೀತಿಯಾದ ಸೌಲಭ್ಯ ಇರಲಿಲ್ಲ ಯಾವುದಾರೊಂದು ವಿಷಯವನ್ನು ಪಡೆಯಬೇಕಾದರೆ ತುಂಬಾ ಕಷ್ಟವಾಗುತ್ತಿತ್ತು. ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆಂದು ಎಲ್ಲಾ ರೀತಿಯ ಸೌಲಭ್ಯವನ್ನು ನೀಡುತ್ತಿದ್ದಾರೆ, ಆದರೆ ನಮ್ಮ ಕಾಲದಲ್ಲಿ ಮನೆ, ಹೊಲದ ಕೆಲಸವನ್ನು ಮಾಡುತ್ತಾ ಶಿಕ್ಷಣವನ್ನು ಪಡೆಯಬೇಕಿತ್ತು. ಇಂದಿನ ದಿನಮಾನದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಿ ಸಮಾಜ ಇದೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯಾದ ಸನ್ಮಾನವನ್ನು ಮಾಡುತ್ತಿರಲಿಲ್ಲ, ನಿಮ್ಮ ಪೋಷಕರು ಸಹಾ ಸನ್ಮಾನವನ್ನು ಪಡೆದಿಲ್ಲ, ಅವರಿಗೆ ಶಿಕ್ಷಣಕ್ಕಿಂತ ಹಸಿವನ್ನು ನೀಗಿಸುವ ಕಾರ್ಯ ಹೆಚ್ಚಾಗಿತ್ತು ಎಂದರು.
ಹಿಂದಿನ ಕಾಲದಲ್ಲಿ ಅನ್ನ ಸಿಕ್ಕರೆ ಸಾಕು ಬೆಳೆಯುತ್ತೇವೆ ಎನ್ನುತ್ತಿದ್ದರು, ಆದರೆ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇದೆ. ನೀವುಗಳು ಸತತವಾದ ಪರಿಶ್ರಮ ಪ್ರಯತ್ನ ವನ್ನು ಮಾಡುವುದರ ಮೂಲಕ ಪ್ರಗತಿಯನ್ನು ಸಾಧಿಸಬೇಕಿದೆ. ಈಗ ಜಗತ್ತನ್ನು ತಿಳಿಯಲು ಬೇರೆ ಕಡೆ ಹೋಗುವ ಅಗತ್ಯ ಇಲ್ಲ ಎಲ್ಲವನ್ನು ನಿಮ್ಮ ತುದಿ ಬೆರಳಿನಲ್ಲಿಯೇ ಪಡೆಯಬಹುದಾಗಿದೆ ಅಷ್ಟೊಂದು ಮಟ್ಟ ದಲ್ಲಿ ತಂತ್ರಜ್ಞಾನ ಹೆಚ್ಚಿದೆ. ಇಂದಿನ ದಿನಮಾನದಲ್ಲಿ ಶಾಲಾ–ಕಾಲೇಜುಗಳು ಪ್ರಮಾಣ ಪತ್ರವನ್ನು ನೀಡುವ ಕೇಂದ್ರಗಳಾಗಿವೆ. ಗೂಗಲ್ನಲ್ಲಿ ಎಲ್ಲವೂ ಸಹಾ ಸಿಗುತ್ತದೆ. ನಿಮ್ಮ ಪ್ರಯತ್ನ, ಪರಿಶ್ರಮ, ನಂಬಿಕೆಯಿಂದ ಪೋಷಕರ ನಂಬಿಕೆಯನ್ನು ಉಳಿಸಿಕೊಳ್ಳಿ ನಿಮ್ಮ ಸನ್ಮಾನವನ್ನು ವೇದಿಕೆಯ ಕೆಳಗಡೆ ಇರುವ ನಿಮ್ಮ ಪೋಷಕರು ಸಂತೋಷವನ್ನು ಪಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ವೀರಶೈವ ಸಮಾಜ(ರಿ.)ದ ಅಧ್ಯಕ್ಷರಾದ ಹೆಚ್.ಎನ್. ತಿಪ್ಪೇಸ್ವಾಮಿ ವಹಿಸಿದ್ದರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಗಂಗಾಧರ ಪಿ.ಎಸ್. ಉಪನ್ಯಾಸ ನೀಡಿದರು.
ಸಮಾಜದ ನಿರ್ದೆಶಕರುಗಳಾದ ಪಟೇಲ್ ಶಿವಕುಮಾರ್,ಸಿದ್ದವ್ವನಹಳ್ಳಿ ಪರಮೇಶ್, ಕೆ.ಎನ್.ವಿಶ್ವನಾಥಯ್ಯ, ಡಿ.ಎಸ್.ಮಲ್ಲಿಕಾರ್ಜನ್, ಎಂ.ಸಿದ್ದಪ್ಪ ಪಿ.ಪಿಳ್ಳೆಕೇರನ ಹಳ್ಳಿ, ಎಸ್.ವಿ.ನಾಗರಾಜಪ್ಪ, ಶ್ರೀಮತಿ ಟಿ.ಕೆ.ಲತಾ ಉಮೇಶ್, ಜಿ.ಎಂ.ಪ್ರಕಾಶ್, ಎಸ್.ವಿ.ಸಿದ್ದಪ್ಪ ಜ್ಞಾನಮೂರ್ತಿ ಭಾಗವಹಿಸಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು, ಕಾರ್ಯದರ್ಶಿಗಳಾದ ಪಿ.ವಿರೇಂದ್ರ ಕುಮಾರ್ ಸ್ವಾಗತಿಸಿದರು, ನಿರ್ದೇಶಕರಾದ ಎಸ್.ವಿ. ಕೋಟ್ರೇಶ್ ವಂದಿಸಿದರು. ಎಸ್. ಷಡಾಕ್ಷರಯ್ಯ ಕಾರ್ಯಕ್ರಮ ನಿರೂಪಿಸಿದರು.