ಈ ಮಳೆಗಾಲದಲ್ಲಿ ಬಂಗುಡೆ ಮೀನಿನ ರೇಟ್ ಸಿಕ್ಕಾ ಪಟ್ಟೆ ಹೆಚ್ಚಿದೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಒಂದು ಕೆ.ಜಿ. ಬಂಗುಡೆ ಮೀನು ಕೊಳ್ಳುವ ಬದಲು ಅರ್ಧ ಕೆಜಿ ತಂದು ಇಲ್ಲಿ ನಾವು ಕೊಡುವ ಟಿಪ್ಸ್ ಪಾಲಿಸಿ ಮನೆ ಮಂದಿಗೆಲ್ಲಾ ಹೊಟ್ಟೆ ತುಂಬಾ ಬಡಿಸಿ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ಅರ್ಧ ಕೆ.ಜಿ. ಬಂಡುಗೆ ಜೊತೆಗೆ ಕಾಲು ಕೆಜಿ ಬೆಂಡೆ ಕಾಯಿ ಖರೀದಿಸಿ. ಮೂರು ಟೊಮೆಟೋ ಹಾಕುವ ಬದಲು 5 ಟೊಮೆಟೋಗಳನ್ನು ಹಾಕಿ. ಖಾರ ಬೇಕಾದರೆ ಕಾಯಿ ಮೆಣಸು ಹಾಕಿ. ಅದರ ಜೊತೆಗೆ ಮಾರ್ಕೆಟ್ನಲ್ಲಿ ಖಾರವಲ್ಲದ ಹಸಿ ಮೆಣಸು ಸಿಗುತ್ತದೆ. ಅದನ್ನೂ ಹಾಕಬೇಕು.
ಬೇಕಾಗುವ ಸಾಮಗ್ರಿ ಬಂಗುಡೆ ಮೀನು 1/2 ಕೆಜಿ ಈರುಳ್ಳಿ 2 ಟೊಮೆಟೊ 5 ಹಸಿಮೆಣಸು ಲಿಂಬೆ ಗಾತ್ರ ತೆಂಗಿನ ಕಾಯಿ ಹಾಲು- 1/2 ಗಡಿ ಬ್ಯಾಡಿಗೆ ಮೆಣಸು 15 ಅರಿಶಿಣ ಪುಡಿ 1/2 ಚಮಚ ಉಪ್ಪು ರುಚಿಗೆ ಬೇಕಾದಷ್ಟು ಎಣ್ಣೆ 2 ಚಮಚ ಸ್ವಲ್ಪ ಸಾಸಿವೆ ಸ್ವಲ್ಪ ಕರಿಬೇವು ಸ್ವಲ್ಪ ಶುಂಠಿ ಸ್ವಲ್ಪ ಬೆಳ್ಳುಳ್ಳಿ ಎಸಳು ಜೀರಿಗೆ ಸ್ವಲ್ಪ ಕೊತ್ತಂಬರಿ ಸ್ವಲ್ಪ ಮೆಂತ್ಯೆ ಐದಾರು ಕಾಳು ಓಮ ಒಂದು ಚಿಟಿಕೆ ಹುಣಸೆ ಹಣ್ಣು ಒಂದು ದೊಡ್ಡ ನಿಂಬೆಹಣ್ಣು ಗಾತ್ರದಷ್ಟು (ನೀರಿನಲ್ಲಿ ಹುಣಸೆಹಣ್ಣು ಹಾಕಿ ಕಲೆಸಿ ಹುಣಸೆರಸ ಮಾಡಿ) ಐದಾರು ಬೆಂಡೆ ಕಾಯಿ ಹಸಿ ಮೆಣಸು 3 ಖಾರವಲ್ಲದ ಹಸಿಮೆಣಸು 5
ಮಾಡುವ ವಿಧಾನ ತೆಂಗಿನ ತುರಿ, ಮೆಣಸು, ಸ್ವಲ್ಪ ಸಾಸಿವೆ, ಅರಿಶಿಣ ಪುಡಿ, ಜೀರಿಗೆ, ಕೊತ್ತಂಬರಿ, ಓಮ ಯಾವುದನ್ನೂ ಎಣ್ಣೆಯಲ್ಲಿ ಬಿಸಿ ಮಾಡದೆ ಹಾಗೆಯೇ ಗ್ರೈಂಡರ್ಗೆ ಹಾಕಿ ಅರೆಯಿರಿ. ಮೆಂತ್ಯೆಯನ್ನು ಎಣ್ಣೆ ಹಾಕದೆ ಕೆಂಪಾಗುವಷ್ಟು ಕರಿದು ಅದನ್ನು ಹುಣಸೆ ಜೊತೆ ಮಸಾಲೆ ಅರ್ಧದಷ್ಟು ಹುಡಿಯಾದ ಮೇಲೆ ಗ್ರೈಂಡರ್ಗೆ ಹಾಕಿ. ವಿಶೇಷ ಸೂಚನೆ: ಮಸಾಲೆ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಕರಿದರೆ ಇದರ ರುಚಿ ಹಾಳಾಗುವುದಲ್ಲದೆ, ಇದರಲ್ಲಿ ಅಡಗಿರುವ ಪೋಷಕಾಂಶಗಳು ನಾಶವಾಗುತ್ತದೆ. ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ, ಈರುಳ್ಳಿ ಮೆತ್ತಗಾದಾಗ ಟೊಮೆಟೊ ಹಾಕಿ. ಹಚ್ಚಿಟ್ಟ ಶುಂಠಿ, ಹಚ್ಚಿಟ್ಟ ಬೆಳ್ಳುಳ್ಳಿಯನ್ನೂ ಹಾಕಿ. ಟೊಮೆಟೊ ಮೆತ್ತಗಾದ ಮೇಲೆ ಹುಣಸೆಹಣ್ಣಿನ ರಸ ಹಾಕಿ, ಹುಣಸೆ ಹಣ್ಣಿನ ರಸ ಕುದಿ ಬರಲಾರಂಭಿಸಿದಾಗ ನೀವು ರುಬ್ಬಿದ ಕಾಯಿ ಮಸಾಲೆ ಸೇರಿಸಿ. ಬೆಂಡೆಕಾಯಿಯನ್ನು ಎರಡ್ಮೂರು ತುಂಡು ಮಾಡಿ ಮಸಾಲೆಗೆ ಹಾಕಿ. ಅದರ ಜೊತೆಗೆ ಖಾರವಲ್ಲದ ಇಡೀ ಮೆಣಸನ್ನು ತುಂಡು ಮಾಡದೆ ಹಾಗೆ ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ. ಈಗ ಈ ಸಾರು ಕುದಿ ಬರಬೇಕು, ಬಳಿಕ ಉರಿ ಸ್ವಲ್ಪ ಕಡಿಮೆ ಮಾಡಿ ಮೀನು ಸೇರಿಸಿ, ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ, ಬಳಿಕ ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿದರೆ ಸೂಪರ್ ರುಚಿಯ ಮೀನಿನ ಸಾರು ರೆಡಿ. ಬೇಕಿದ್ದರೆ ಪದಾರ್ಥ ರೆಡಿಯಾದ ಮೇಲೆ ಅದರ ಮೇಲೆ ಸ್ವಲ್ಪ ಬೆಣ್ಣೆ ಹಾಕಿದರೆ ಉತ್ತಮ. ಕೇವಲ ಅರ್ಧ ಕೆ.ಜಿ ಬಂಗುಡೆಯಲ್ಲೇ ಒಂದು ಕೆ.ಜಿ.ಯಷ್ಟು ಆಗುವಷ್ಟು ಸಾರು ಮಾಡಬಹುದು ಎಂಬ ಐಡಿಯಾ ನಮ್ಮ ತುಳುನಾಡಿನ ಹೆಂಗಸರಿಗೆ ಮೊದಲೇ ಗೊತ್ತಿತ್ತು. ಇದು ಆರೋಗ್ಯಕ್ಕೂ ಒಳ್ಳೆಯದು. ಬೇಕಿದ್ದರೆ ನೀವೂ ಟ್ರೈ ಮಾಡಿ.