ಕೊಪ್ಪಳ : ಗಂಗಾವತಿಯ ಹಾಲಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಅವರ ನಡುವೆ ವೈಮನಸ್ಸು ಮೂಡಿ ಕಳೆದ ಹಲವು ವರ್ಷಗಳಿಂದ ದೂರವೇ ಇದ್ದರು. ಆದರೆ ಇದೀಗ ಇವರಿಬ್ಬರು ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಬಳ್ಳಾರಿ ವಿಭಾಗದ ಸಂಘಟನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತಿದ್ದರು. ಇನ್ನು ಈ ಸಭೆಯಲ್ಲಿ ಅಧಿಕೃತವಾಗಿ ಅವರಿಬ್ಬರನ್ನು ಒಂದು ಗೂಡಿಸುವ ಯತ್ನ ನಡೆಯಿತು.
ಈ ವೇಳೆ ಸಭೆಯಲ್ಲಿ ಮಾತನಾಡಿ ಶಾಸಕ ಜನಾರ್ದನ ರೆಡ್ಡಿ ಅವರು, ನನ್ನ ರಾಮುಲು ಮದ್ಯೆ ಏನಿಲ್ಲ, ನಾವಿಬ್ಬರೂ ಜೀವದ ಗೆಳೆಯರು. ನಮ್ಮಿಬ್ಬರ ಮಧ್ಯೆ ಯಾರ ಮಧ್ಯಸ್ಥಿಕೆ ಬೇಡ. ಮಧ್ಯಸ್ಥಿಕೆ ಮಾಡುತ್ತೇವೆ ಅನ್ನೋದು ಮೂರ್ಖತನ. ಜಗಳದಿಂದ ಲಾಭ ಮಾಡಿಕೊಳ್ಳವವರು ಮತ್ತು ಸರಿ ಮಾಡುತ್ತೇನೆ ಎನ್ನುವವರು ಮೂರ್ಖರು. ಅರ್ಧ ಗ್ಲಾಸ್ ನೀರು ಕುಡಿ ಯುವುದರಲ್ಲಿ ಸರಿ ಆಗತ್ತೆ. ಅದೊಂದು ಕೆಟ್ಟ ಘಳಿಗೆ. ನಾನು, ರಾಮುಲು ಮತ್ತು ವಿಜಯೇಂದ್ರ ಓಡಾಡಿ ನಮ್ಮ ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಅವರು, ಪಕ್ಷದ ವಿಚಾರ ಬಂದಾಗ ನಾವು ಒಂದಾಗಬೇಕು. ಬೇರೆಯವರಿಗೆ ನೀತಿ ಹೇಳುವವರು, ನಾವು ಒಗ್ಗಟ್ಟಾಗಿರಬೇಕು. ಶಾಸಕ ಜನಾರ್ದನರೆಡ್ಡಿ ಜತೆ ನನಗೆ ಯಾವುದೇ ಜಗಳ ಇಲ್ಲ. ನಾನು, ಜನಾರ್ದನರೆಡ್ಡಿ ಮತ್ತೆ ಒಂದಾಗಿದ್ದೇವೆ ಎಂದಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಆಪ್ತಮಿತ್ರರು. ಅಕ್ರಮ ಗಣಿಗಾರಿಗೆ ಆರೋಪದ ಮೇಲೆ ಜನಾರ್ದನ ರೆಡ್ಡಿ ಜೈಲು ಪಾಲಾದರೂ ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪ್ರಚಾರ ಮಾಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಆಗಿದ್ದ ಬಂಗಾರು ಹನುಮಂತು ಅವರ ಸೋಲಾಯಿತು ಎಂದು ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಈ ಘಟನೆಯು ರೆಡ್ಡಿ-ರಾಮುಲು ನಡುವಿನ ಬಿರುಕಿಗೆ ನಾಂದಿಯಾಗಿತ್ತು. ಇದರ ಜೊತೆಗೆ ಆಂತರಿಕವಾಗಿ ಇದ್ದ ಕೆಲ ಖಾಸಗಿ ಭಿನ್ನಾಭಿಪ್ರಾಯದಿಂದ ಇಬ್ಬರು ಸಿಡಿದೆದ್ದು, ಏಕವಚನದಲ್ಲೇ ಬೈದಾಡಿಕೊಂಡಿದ್ದರು. ಬಳ್ಳಾರಿಯಲ್ಲಿದ್ದ ತಮ್ಮ ಮನೆಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ದ್ವಾರಗಳನ್ನು ಬಂದ್ ಮಾಡಿಕೊಂಡಿದ್ದರು.