ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ಹಿನ್ನೆಲೆಯಲ್ಲಿ ಕೋಟ್ಯಂತರ ರೂಗಳ ಭ್ರಷ್ಟಾಚಾರ ನಡೆದಿದ್ದು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ಆಗಬೇಕು, ತನಿಖೆ ಪೂರ್ಣ ಆಗುವವರೆಗೂ ಸಚಿವ ಸಂತೋಷ ಲಾಡ್ ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ೩೫ ಸಾವಿರ ಜನ ಕಟ್ಟಡ ಕಾರ್ಮಿಕರಿದ್ದಾರೆಂದು ಕಾರ್ಮಿಕ ಇಲಾಖೆ ಮಾಹಿತಿಯನ್ನು ನೀಡಿದೆ. ಆದರೆ ಇದರಲ್ಲಿ ೧೩ – ೧೪ ವರ್ಷಗಳ ಬಾಲಕರನ್ನು ಸೇರಿಸಿಕೊಂಡು ಅವರಿಗೂ ಸಹ ಗುರುತಿನ ಚೀಟಿ ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಜಾಗದಲ್ಲಿಯೂ ಸಹ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮಾಡಿಲ್ಲ.. ಒಂದು ವೇಳೆ ತಪಾಸಣೆ ನಡೆಸಿದ್ದರೂ ಸಹ ಸಂಬಂಧಪಟ್ಟ ಕಾರ್ಮಿಕರಿಗೆ ಆತನ ಆರೋಗ್ಯದ ಬಗ್ಗೆ ಯಾವುದೇ ವರದಿಯನ್ನು ಸಹ ನೀಡಿಲ್ಲ. ಇದರ ಬಗ್ಗೆ ಇಲಾಖೆಯಲ್ಲಿಯೂ ಸಹಾ ದಾಖಲಾತಿ ಇಲ್ಲ ಎಂದು ದೂರಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ೨೦೨೩-೨೪ ಹಾಗೂ ೨೦೨೪-೨೫ ನೇ ಸಾಲಿನಲ್ಲಿ ತಲಾ ೩೭ ಸಾವಿರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿ ತಲಾ ಒಬ್ಬರಿಗೆ ೨೦ ಪರೀಕ್ಷೆಗಳಿಗೆ ೩ ಸಾವಿರ ರೂ ಗಳನ್ನು ವಸೂಲಿ ಮಾಡಿದ್ದಾರೆ.ಈ ತಪಾಸಣೆಯನ್ನು ಸಹ ಯಾವುದೇ ಅಧಿಕೃತ ಏಜೆನ್ಸಿಗಳಿಗೆ ಕೊಡದೇ ತುಮಕೂರಿನ ಆಯುರ್ವೇದ ಕಾಲೇಜೆ ಒಂದಕ್ಕೆ ನೀಡಲಾಗಿದೆ.ಇವರು ಒಂದೇ ಟೆಸ್ಟಿನಲ್ಲಿ ಮೂರು ವರದಿಗಳು ಬರುವಂತಿದ್ದರೂ ಸಹ ಅವುಗಳನ್ನು ಪ್ರತ್ಯೇಕ ಮಾಡಿ ಹಣ ಲೂಟಿ ಮಾಡಿದ್ದಾರೆ ಎಂದು ನವೀನ್ ಆರೋಪಿಸಿದರು.
ಈ ಎರಡು ವರ್ಷದಲ್ಲಿ ಸಹ ಸರಿಯಾಗಿ ೩೭ ಸಾವಿರ ಕಟ್ಟಡ ಕಾರ್ಮಿಕರನ್ನೇ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ ಆದರೆ ಈ ಎರಡು ವರ್ಷಗಳಲ್ಲಿ ಯಾರು ಮೃತಪಟ್ಟಿಲ್ಲವೇ..? ಅಥವಾ ಹೊಸದಾಗಿ ಸೇರ್ಪಡೆಯಾಗಿಲ್ಲವೇ..? ಇದರ ಬಗ್ಗೆ ಸದನದಲ್ಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತಲಾಗುವುದು.. ಇದಲ್ಲದೇ ಚಿತ್ರದುರ್ಗ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತನಾಡಿದ್ದು ಅವರು ಸಹ ತಮಗೆ ಅನ್ಯಾಯವಾಗಿರುವ ಬಗ್ಗೆ ತಿಳಿಸಿದ್ದಾರೆ. ಇದ್ದಲ್ಲದೆ ಕಾರ್ಮಿಕ ಇಲಾಖೆಯವತಿಯಿಂದ ಕಟ್ಟಡ ಕಾರ್ಮಿಕರಿಗೆ ನೀಡಿರುವ ಕಿಟ್ ಗಳಲ್ಲಿ ಕಳಪೆಯಾದಂತಹ ವಸ್ತುಗಳನ್ನು ಹಾಕಲಾಗಿದೆ.. ಈ ಕಿಟ್ ನ ಮೊತ್ತ ೬೦೦/- ರೂಗಳಿದ್ದರೆ ಅವರು ೨ ಸಾವಿರ ರೂಗಳಿಗೆ ಖರೀದಿ ಮಾಡಿರುವುದಾಗಿ ತೋರಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಆರೋಗ್ಯ ತಪಾಸಣೆಗೆ ಸಂಬಂಧಪಟ್ಟಂತೆ ದರವನ್ನು ನಿಗದಿ ಮಾಡಿದೆ.. ಆದರೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕೇಂದ್ರ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ದುಪ್ಪಟ್ಟು ಹಣವನ್ನು ನಿಗದಿ ಮಾಡಿ ಕಾರ್ಮಿಕ ಇಲಾಖೆಯ ಮಂಡಳಿಯಲ್ಲಿರುವ ಹಣ ಲೂಟಿ ಮಾಡಲು ಈ ರೀತಿಯಾದಂತಹ ಕಳಪೆ ಯೋಜನೆಗಳನ್ನು ಜಾರಿ ಮಾಡುತ್ತಿದೆ. ದೇಶ, ವಿದೇಶ ಹಾಗೂ ಮೋದಿಯವರ ಬಗ್ಗೆ ಮಾತನಾಡುವ ಸಚಿವ ಸಂತೋಷ ಲಾಡ್ ರವರು ತಮ್ಮ ಇಲಾಖೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಸಹ ತಮಗೆ ಗೊತ್ತಿದ್ದರೂ ಗೊತ್ತಿಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.ಈ ಹಿಂದೆ ಕಟ್ಟಡ ಕಾರ್ಮಿಕರಿಗೆ ನೀಡಿದ ಕಿಟ್ ಗಳಲ್ಲಿ ಸಹ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದಲ್ಲಿ ಸಿಗುವಂತಹ ವಸ್ತುಗಳನ್ನು ದುಬಾರಿ ಹಣವನ್ನು ನೀಡಿ ಖರೇದಿ ಮಾಡಿ ಕಾರ್ಮಿಕರಿಗೆ ನೀಡಿದ್ದಾರೆ.. ಮೋಸ ಮಾಡಿದ್ದಾರೆ.. ಇದರ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸಚಿವರು ಉತ್ತರ ಕೊಡದೇ ಸದನ ಮುಗಿಯುವವರೆಗೂ ಸದನಕ್ಕೆ ಗೈರು ಹಾಜರಾಗಿದ್ದರು ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಧ್ವನಿಯಾಗುವುದರ ಮೂಲಕ ಅವರಿಗೆ ನ್ಯಾಯವನ್ನು ದೊರಕಿಸಿ ಕೊಡುವಂತಹ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು.. ಬಿಜೆಪಿ ಪಕ್ಷದ ವತಿಯಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ವ್ಯಾಪಿ ಮಾಹಿತಿಯನ್ನು ಸಂಗ್ರಹಿಸಿ ಹೋರಾಟ ಮಾಡಲಾಗುವುದು ಎಂಧು ನವೀನ್ ತಿಳಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ಕಾರ್ಯದರ್ಶಿ ಮೋಹನ್, ವಕ್ತಾರ ನಾಗರಾಜ ಬೆದ್ರೇ ಭಾಗವಹಿಸಿದ್ದರು.