ನೋಮ್ ಪೆನ್ : ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿ ಘರ್ಷಣೆ ಉದ್ವಿಗ್ನತೆ ತಾರಕಕ್ಕೇರಿದೆ. ಈ ಹಿನ್ನೆಲೆ ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸಲಹೆ ನೀಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಯಭಾರ ಕಚೇರಿ, ಆಗ್ನೇಯ ಏಷ್ಯಾದ ಕಾಂಬೋಡಿಯಾ-ಥೈಲ್ಯಾಂಡ್ ಗಡಿಯಲ್ಲಿ ಘರ್ಷಣೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಗಡಿ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದೆ.
ಕಾಂಬೋಡಿಯಾದ ರಾಜಧಾನಿ ನೋಮ್ ಪೆನ್‌ನಲ್ಲಿರುವ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ತುರ್ತು ಸಂಪರ್ಕ ಮಾಹಿತಿಯನ್ನು ಹಂಚಿಕೊಂಡಿದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಭಾರತದ ರಾಯಭಾರ ಕಚೇರಿ, ನೋಮ್ ಪೆನ್ ಅನ್ನು ಕರೆ ಮಾಡಿ ಸಂಪರ್ಕಿಸಬಹುದು ಎಂದು ತಿಳಿಸಿದೆ.
ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಘರ್ಷಣೆಗಳು ಇಂದು ಮೂರನೇ ದಿನಕ್ಕೆ ಕಾಲಿಟ್ಟಿವೆ. ಈವರೆಗೆ ಹೋರಾಟದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಎಂಟು ನಾಗರಿಕರು ಮತ್ತು ಐದು ಸೈನಿಕರು ಸೇರಿದ್ದಾರೆ. 71 ಜನರು ಗಾಯಗೊಂಡಿದ್ದಾರೆ ಎಂದು ಕಾಂಬೋಡಿಯಾದ ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ಶುಕ್ರವಾರ ಐದು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಥಾಯ್ ಸೇನೆ ತಿಳಿಸಿದೆ. ಇದರಿಂದಾಗಿ 14 ನಾಗರಿಕರು ಮತ್ತು ಆರು ಸೈನಿಕರು ಸೇರಿದಂತೆ ಥೈಲ್ಯಾಂಡ್‌ನ ಸಾವಿನ ಸಂಖ್ಯೆ 20 ಕ್ಕೆ ತಲುಪಿದೆ. ಎರಡೂ ದೇಶಗಳಿಂದ ಒಟ್ಟು ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.