ಮುಂಬೈ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ, ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಕನ್ನಡಿಗ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರು ಮೂವತ್ತು ವರ್ಷಗಳ ಅದ್ಭುತ ಸೇವೆಯ ನಂತರ ಈ ತಿಂಗಳ ಅಂತ್ಯಕ್ಕೆ ವೃತ್ತಿಯಿಂದ ನಿವೃತ್ತರಾಗಲಿದ್ದಾರೆ.
1995ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ಸೇರ್ಪಡೆಗೊಂಡಿದ್ದ ದಯಾ ನಾಯಕ್, ಇದೀಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ACP) ಹುದ್ದೆಯಿಂದ ಬೀಳ್ಕೊಡಲಿದ್ದಾರೆ. ಮುಂಬೈ ಅಂಡರ್‌ವರ್ಲ್ಡ್‌ನ ಪಾಪಿಗಳಿಗೆ ಪೊಲೀಸ್ ಶಕ್ತಿ ಏನೆಂದು ತೋರಿಸಿಕೊಟ್ಟ ದಯಾ ನಾಯಕ್, “ಮುಂಬೈನಲ್ಲಿ ಇನ್ನು ಗ್ಯಾಂಗ್‌ಸ್ಟರ್‌ಗಳ ಆಳ್ವಿಕೆ ನಡೆಯುವುದಿಲ್ಲ” ಎಂಬುದನ್ನು ತಮ್ಮ ಕಾರ್ಯಗಳಿಂದಲೇ ಸಾಬೀತುಪಡಿಸಿದ್ದರು.
85ಕ್ಕೂ ಹೆಚ್ಚು ಎನ್‌ಕೌಂಟರ್‌ಗಳು: ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯ ಸದಸ್ಯರು ಸೇರಿದಂತೆ, ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಚೋಟಾ ರಾಜನ್, ಅಬು ಸಲೇಂ, ಅರುಣ್ ಗೌಳಿ, ರವಿ ಪೂಜಾರಿ ಗ್ಯಾಂಗ್‌ಗಳಿಗೆ ಸೇರಿದ ಸುಮಾರು 85 ಜನರನ್ನು ಎನ್‌ಕೌಂಟರ್ ಮಾಡುವ ಮೂಲಕ ದಯಾ ನಾಯಕ್ ದೇಶಾದ್ಯಂತ ಸುದ್ದಿಯಾಗಿದ್ದರು.
ಸಾಮಾಜಿಕ ಕಾರ್ಯ ಮತ್ತು ಸಮರ್ಪಣೆ: ಹುಟ್ಟೂರು ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿದ ದಯಾ ನಾಯಕ್, ಸಾವಿರಾರು ಮಕ್ಕಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ. ವೃತ್ತಿ ಜೀವನದ ಆರಂಭದಿಂದಲೂ ತಮ್ಮದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದ್ದ ಅವರು, ಭಾರತದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆ ‘ರಾ’ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗಳಿಗೂ ಸಹಕಾರ ನೀಡಿದ್ದಾರೆ. ವೃತ್ತಿಜೀವನದಲ್ಲಿ ಎದುರಾದ ಸೋಲು ಮತ್ತು ಅವಮಾನಗಳನ್ನು ಲೆಕ್ಕಿಸದೆ, ಅವರು ವಿಜಯದ ಪಥದಲ್ಲಿ ಸಾಗಿದರು. ಕೊಟ್ಟ ಮಾತಿಗೆ ತಪ್ಪದೆ, ಇಟ್ಟ ಹೆಜ್ಜೆಯಿಂದ ಎಂದಿಗೂ ಹಿಂದೆ ಸರಿದವರಲ್ಲ ಎಂದು ಅವರ ಬಗ್ಗೆ ಹೇಳಲಾಗುತ್ತದೆ.