ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ಸೌಮ್ಯಾ ಕೊಲೆ ಪ್ರಕರಣದ ಅಪರಾಧಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಗೋವಿಂದಚಾಮಿ ಸೆರೆಯಾದ ಅಪರಾಧಿ. ಈತ ಕಣ್ಣೂರು ನಗರದ ಡಿಸಿಸಿ ಕಚೇರಿ ಸಮೀಪದ ಖಾಲಿ ಕಟ್ಟಡದ ಬಳಿಯ ಬಾವಿಯಲ್ಲಿ ಅಡಗಿದ್ದ.
ಈತ ಹೆಚ್ಚಿನ ಭದ್ರತಾ ವಲಯವಾದ 10ನೇ ಬ್ಲಾಕ್‌ನಿಂದ ನಾಪತ್ತೆಯಾಗಿರುವುದನ್ನು ಜೈಲಾಧಿಕಾರಿಗಳು ಗಮನಿಸಿದ್ದಾರೆ. ಮೊದಲು ಶಾಲು ಬಳಸಿ ಎರಡನೇ ಗೋಡೆ ಹಾರಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಒಂದು ಅಂಗೈ ಇಲ್ಲದ ಗೋವಿಂದಚಾಮಿ ಜೈಲಿನಿಂದ ತಪ್ಪಿಸಿಕೊಳ್ಳಲು ಹೊರಗಿನವರ ಸಹಾಯ ಪಡೆದಿರುವ ಕುರಿತು ಪೊಲೀಸರು ಶಂಕಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಸ್ನಿಫರ್ ನಾಯಿ ಸೇರಿದಂತೆ ಪೊಲೀಸ್ ತಂಡ ಆ ಪ್ರದೇಶಕ್ಕೆ ತಲುಪಿತು. ಅಪರಾಧಿ ಅಡಗಿರುವ ಪಾಳುಬಿದ್ದ ಕಟ್ಟಡ ಪರಿಶೀಲಿಸಿತು. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರಾಗೃಹದ ನಾಲ್ವರು ಅಧಿಕಾರಿಗಳು ಅಮಾನತು: ಗೋವಿಂದಚಾಮಿ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಕೇಂದ್ರ ಕಾರಾಗೃಹದ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಸಿಬ್ಬಂದಿಯಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ರಿಜೊ, ಉಪ ಕಾರಾಗೃಹ ಅಧಿಕಾರಿ ರಾಜೀಶ್ ಮತ್ತು ಸಹಾಯಕ ಕಾರಾಗೃಹ ಅಧಿಕಾರಿಗಳಾದ ಸಂಜಯ್ ಮತ್ತು ಅಖಿಲ್ ಸೇರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೈಲು ಮುಖ್ಯಸ್ಥ ಬಲರಾಮ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.
ಅಪರಾಧಿಯ ಕೃತ್ಯವೇನು?
2011ರ ಫೆಬ್ರವರಿ 1ರಂದು ಎರ್ನಾಕುಲಂನಿಂದ ಶೋರ್ನೂರ್‌ಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಸೌಮ್ಯಾ(23) ಎಂಬ ಯುವತಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಇದಕ್ಕೂ ಮೊದಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಗೋವಿಂದಚಾಮಿಗೆ ವಾಂಟೆಡ್ ನೋಟಿಸ್ ಜಾರಿ ಮಾಡಿತ್ತು. “ಸೌಮ್ಯ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಗೋವಿಂದಚಾಮಿ ನಂ.46 ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ವಾಂಟೆಡ್ ಅಪರಾಧಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೆ ತುರ್ತಾಗಿ ಮಾಹಿತಿ ತಿಳಿಸಬೇಕು. ಗುರುತಿನ ಗುರುತು- ಅವನಿಗೆ ಒಂದು ಅಂಗೈ ಇಲ್ಲ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.