ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ನಡೆದಿದೆ.
ದೇವಸ್ಥಾನದ ಕಾವಲುಗಾರ ಈ ಕೃತ್ಯವನ್ನು ಗಮನಿಸಿದಾಗ, ಕಳ್ಳರು ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಕಾವಲುಗಾರ ತಕ್ಷಣ ಸ್ಥಳೀಯ ಭಕ್ತರಿಗೆ ಮಾಹಿತಿ ನೀಡಿದ್ದು. ದೇವಸ್ಥಾನದ ಸುತ್ತಮುತ್ತಲಿನ ಜನರು ಒಟ್ಟಾಗಿ ಸೇರಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಆಗಮಿಸಿ, ಪರಾರಿಯಾದ ಮಾರ್ಗ ತಿಳಿದುಬಂದಿದೆ. ಸ್ಥಳೀಯರು ತಕ್ಷಣ ಹುಡುಕಾಟ ನಡೆಸಿ. ಕಡಿಯಾಳಿ ಪೆಟ್ರೋಲ್ ಬಂಕ್ ಸಮೀಪ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.
ಪರಾರಿಯಾಗುವಾಗ ಒಬ್ಬ ಕಳ್ಳನಿಗೆ ಮೂರ್ಛೆ ಬಂದು ಕುಸಿದಿದ್ದಾನೆ. ಓಡಲು ಯತ್ನಿಸಿದ ಮತ್ತೊಬ್ಬ ಕಳ್ಳನನ್ನೂ ಸ್ಥಳೀಯರು ಹಿಡಿದಿದ್ದಾರೆ. ಮೂರ್ಛೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ ಸ್ಥಳೀಯರು ಕಳ್ಳತನಕ್ಕೆ ತಂದಿದ್ದ ಕಬ್ಬಿಣದ ಸಾಧನಗಳನ್ನು ಕೈಗೊಪ್ಪಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳೀಯರ ಸಹಕಾರದೊಂದಿಗೆ ಮೂರ್ಛೆಯಿಂದ ಕುಸಿದ ಕಳ್ಳನನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಬ್ಬ ಕಳ್ಳನನ್ನು ಸ್ಥಳೀಯರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕಳ್ಳರು ಕೇರಳ ಮೂಲದವರೆಂದು ಮಾಹಿತಿ ಲಭಿಸಿದೆ. ಇನ್ನಷ್ಟು ವಿವರಗಳು ತಿಳಿದುಬರಬೇಕಿದೆ. ಕಡಿಯಾಳಿ ಮಹಿಷಮರ್ಧಿನಿ ದೇವಿಯೇ ಕಳ್ಳನಿಗೆ ಮೂರ್ಛ ತರಿಸಿದ್ದಾಳೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ, ದೇವಸ್ಥಾನದ ಕಾವಲುಗಾರನ ಕರ್ತವ್ಯನಿಷ್ಠೆಗೆ ಮೆಚ್ಚುಗೆ ವ್ಯಕ್ತವಾಗಿದೆ.