ವಾಷಿಂಗ್ಟನ್ : ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಸಂಬಂಧ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಆಗಸ್ಟ್ 1ರಿಂದ ಭಾರತದ ಮೇಲೆ ಶೇ 25 ಟ್ಯಾರಿಫ್ ಹಾಗೂ ಹೆಚ್ಚುವರಿ ದಂಡವನ್ನು ಹಾಕಲಾಗುವುದು. ಭಾರತ ಅಧಿಕ ಟ್ಯಾರಿಫ್ ವಿಧಿಸುತ್ತಿರುವುದು, ಹಣಕಾಸೇತರ ವ್ಯಾಪಾರ ನಿರ್ಬಂಧ ಹೊಂದಿರುವುದು, ರಷ್ಯಾ ಇಂಧನ ಖರೀದಿಸುತ್ತಿರುವುದು, ಈ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಮೇಲೆ ಆಮದು ಸುಂಕ ಹಾಕಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಭಾರತ ನಮ್ಮ ಸ್ನೇಹಿತ. ಆದರೆ, ತೀರಾ ಹೆಚ್ಚು ಟ್ಯಾರಿಫ್ ಇರುವುದರಿಂದ ಅವರೊಂದಿಗೆ ಕಡಿಮೆ ಬ್ಯುಸಿನೆಸ್ ಮಾಡುತ್ತಿದ್ದೇವೆ. ಯಾವುದೇ ದೇಶವೂ ಹೊಂದಿಲ್ಲದ ಅತ್ಯಂತ ಕಠಿಣ ಮತ್ತು ವಿಚಿತ್ರ ಹಣಕಾಸೇತರ ವ್ಯಾಪಾರ ತಡೆಯನ್ನು ಅವರು ಹೊಂದಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಾರೆ.
‘ಎಲ್ಲರೂ ರಷ್ಯಾ ಉಕ್ರೇನ್‌ನಲ್ಲಿ ಮಾಡುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂದು ಹೇಳುತ್ತಿರುವ ಸಮಯದಲ್ಲಿ ಭಾರತ ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದ ಖರೀದಿಸಿದೆ ಮತ್ತು ಚೀನಾದೊಂದಿಗೆ ರಷ್ಯಾದಿಂದ ಹೆಚ್ಚು ಇಂಧನ ಖರೀದಿ ಮಾಡುತ್ತಿದೆ. ಆದ್ದರಿಂದ ಆಗಸ್ಟ್ 1ರಿಂದ ಭಾರತವು ಶೇ. 25 ಟ್ಯಾರಿಫ್ ಕಟ್ಟಬೇಕು. ಜೊತೆಗೆ ಪೆನಾಲ್ಟಿ ಕೂಡ ತೆರಬೇಕು’ ಎಂದು ಹೇಳಿದ್ದಾರೆ.