ಸನಾ: ಯೆಮೆನ್ ಕರಾವಳಿಯಲ್ಲಿ ಭಾನುವಾರ 154 ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ. ರಕ್ಷಿಸಲ್ಪಟ್ಟ 10 ಜನರಲ್ಲಿ ಒಂಬತ್ತು ಮಂದಿ ಇಥಿಯೋಪಿಯನ್ ಪ್ರಜೆಗಳು ಮತ್ತು ಒಬ್ಬರು ಯೆಮೆನ್ ಪ್ರಜೆ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಹೇಳಿದ್ದಾರೆ.
ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿವೆ. 154 ಇಥಿಯೋಪಿಯನ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಮುಂಜಾನೆ ದಕ್ಷಿಣ ಯೆಮೆನ್ ಪ್ರಾಂತ್ಯದ ಅಬ್ಯಾನ್ನ ಏಡೆನ್ ಕೊಲ್ಲಿಯಲ್ಲಿ ಮುಳುಗಿತು ಎಂದು ಯೆಮೆನ್ನಲ್ಲಿರುವ ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ಮುಖ್ಯಸ್ಥ ಅಬ್ದುಸತ್ತರ್ ಎಸೋವ್ ತಿಳಿಸಿದ್ದಾರೆ. ಆಫ್ರಿಕಾದ ಕೊಂಬು ಮತ್ತು ಯೆಮೆನ್ ನಡುವಿನ ಸಮುದ್ರ ಮಾರ್ಗದ ಅಪಾಯಗಳ ಬಗ್ಗೆ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಪದೇಪದೆ ಎಚ್ಚರಿಸಿದೆ. ಹೆಚ್ಚಾಗಿ ಇಥಿಯೋಪಿಯಾ ಮತ್ತು ಸೊಮಾಲಿಯಾದಿಂದ ಬರುವ ವಲಸಿಗರು, ಸೌದಿ ಅರೇಬಿಯಾ ಅಥವಾ ಇತರ ಗಲ್ಫ್ ರಾಷ್ಟ್ರಗಳನ್ನು ಕೆಲಸ ಹುಡುಕಿಕೊಂಡು ಹೋಗುವವರು ಈ ಮಾರ್ಗದ ಮೂಲಕ ಸಂಚರಿಸುತ್ತಾರೆ. ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಅಪಾಯಕಾರಿ ವಲಸೆ ಮಾರ್ಗಗಳಲ್ಲಿ ಒಂದಾಗಿದೆ ಎಂದು ಐಒಎಂ ಹೇಳಿಕೆಯಲ್ಲಿ ತಿಳಿಸಿದೆ.