ನವದೆಹಲಿ :ನಿಜವಾದ ಭಾರತನೀಯನಾದವನು ಈ ರೀತಿ ಮಾತನಾಡುವುದಿಲ್ಲ ಎಂದು ಭಾರತೀಯ ಸೇನೆ ಬಗ್ಗೆ ಸಂಸದ, ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ಮಾಡಿದ ಹೇಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ರಾಹುಲ್ ಗಾಂಧಿಯನ್ನು ಖಂಡಿಸಿ, ಚೀನಾ 2000 ಕಿಲೋಮೀಟರ್ಗಳಷ್ಟು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನೀವು ನಿಜವಾದ ಭಾರತೀಯರಾಗಿದ್ದರೆ, ನೀವು ಹೀಗೆ ಹೇಳುತ್ತಿರಲಿಲ್ಲ ಎಂದು ಹೇಳಿದೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತು. ರಾಹುಲ್ ಗಾಂಧಿ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳನ್ನು ಎತ್ತಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ ಪರಿಸ್ಥಿತಿ ಎಂದು ಆರಂಭದಲ್ಲಿ ವಾದಿಸಿದರು.
ಇದಕ್ಕೆ ನ್ಯಾಯಮೂರ್ತಿ ದತ್ತಾ ಪ್ರತಿಕ್ರಿಯಿಸಿ, ನೀವು ವಿರೋಧ ಪಕ್ಷದ ನಾಯಕರು, ಸಂಸತ್ತಿನಲ್ಲಿ ಏನಾದರೂ ಹೇಳಿ, ನೀವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.