ಉತ್ತರಾಖಂಡ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ ಎಲ್ಲರಿಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ. ಕೆಲವರು ತಮ್ಮ ಕನಸುಗಳನ್ನು ಬದಿಗಿಟ್ಟು ತಮ್ಮ ಹೆತ್ತವರ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಾರೆ. ಅಂತಹವರಲ್ಲಿ ಮುದ್ರಾ ಗೈರೋಲಾ ಕೂಡ ಒಬ್ಬರು.
ಮೂಲತಃ ಉತ್ತರಾಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗದ ನಿವಾಸಿ ಮುದ್ರಾ ಗೈರೋಲಾ ಅವರ ಕುಟುಂಬ ಸದ್ಯ ದೆಹಲಿಯಲ್ಲಿ ವಾಸಿಸುತ್ತಿದೆ. ಮುದ್ರಾ ಅವರು 10 ನೇ ತರಗತಿಯಲ್ಲಿ ಶೇ 96 ಮತ್ತು 12 ನೇ ತರಗತಿಯಲ್ಲಿ ಶೇ 97 ಅಂಕಗಳನ್ನು ಗಳಿಸಿದರು. ಮುದ್ರಾ ಅವರು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಂದ ಸಾಧನಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಶಾಲಾ ಶಿಕ್ಷಣದ ನಂತರ, ಮುದ್ರಾ ಅವರು ಮುಂಬೈನ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಸೇರಿಕೊಂಡು, ಚಿನ್ನದ ಪದಕ ಗಳಿಸಿದರು. ಪದವಿಯ ನಂತರ, ಅವರು ದೆಹಲಿಗೆ ತೆರಳಿ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂ.ಡಿ.ಎಸ್) ಗೆ ಸೇರಿಕೊಂಡರು. ಆದರೆ, ಅವರ ತಂದೆ ಅರುಣ್ ಗೈರೋಲಾ ಅವರು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ಅವರು 1973 ರಲ್ಲಿ ಪರೀಕ್ಷೆಯನ್ನು ಬರೆದಿದ್ದರೂ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಕನಸು ನನಸಾಗಲಿಲ್ಲ. ಹೀಗಾಗಿ ತಮ್ಮ ತಂದೆಯ ಆಸೆ ನೆರವೇರಿಸಲು ಐಎಎಸ್ ಅಧಿಕಾರಿಯಾಗಲು ವೈದ್ಯಕೀಯ ಶಿಕ್ಷಣವನ್ನು ತೊರೆಯುತ್ತಾರೆ.
ಮುದ್ರಾ ಗೈರೋಲಾ ಅವರು ವೈದ್ಯಕೀಯ ಶಿಕ್ಷಣವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದರು. ಮುದ್ರಾ ಅವರು 2018 ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದು ಸಂದರ್ಶನ ಸುತ್ತಿಗೆ ತಲುಪಿದರೂ, ಅದರಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ನಂತರ, 2019 ರಲ್ಲಿ ಎರಡನೇ ಬಾರಿ ಪ್ರಯತ್ನಿಸಿ, ಸಂದರ್ಶನ ಸುತ್ತಿಗೆ ತಲುಪಿದರೂ ಮತ್ತೆ ವಿಫಲರಾದರು. ಆ ನಂತರ 2020 ರಲ್ಲಿ ಮೂರನೇ ಬಾರಿಗೆ ಪರೀಕ್ಷೆಗೆ ಹಾಜರಾದರೂ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೂ ಛಲ ಬಿಡದೆ, ಕಠಿಣ ಪರಿಶ್ರಮ ಪಟ್ಟು, 2021 ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 165 ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾದರು.
ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಗುರಿಯನ್ನು ಸಾಧಿಸಲು, ಮುದ್ರಾ ಗೈರೋಲಾ ಅವರು 2022 ರಲ್ಲಿ ಮತ್ತೆ ಪರೀಕ್ಷೆಯನ್ನು ಬರೆದು, ಅದರಲ್ಲಿ 53 ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು.