ಹೈದರಾಬಾದ್: ರಾಜಮೌಳಿಯ ಸಿನಿಮಾ ಸೇರಿದಂತೆ ತೆಲುಗಿನ ಎಲ್ಲ ಸಿನಿಮಾಗಳ ಚಿತ್ರೀಕರಣ ಸೋಮವಾರದಿಂದ (ಆ.4) ದಿಢೀರ್ ಸ್ಥಗಿತಗೊಂಡಿದೆ. ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ (ತೆಲುಗು ಸಿನಿಮಾ ಕಾರ್ಮಿಕರ ಒಕ್ಕೂಟ) ಬಂದ್‌ಗೆ ಕರೆ ನೀಡಿದೆ.
24 ವಿವಿಧ ವಿಭಾಗಗಳ ಸಿನಿಮಾ ಕಾರ್ಮಿಕರುಗಳ ಒಕ್ಕೂಟ ಇದಾಗಿದ್ದು, ತನ್ನ ಸುಪರ್ದಿಗೆ ಬರುವ 24 ವಿಭಾಗದ ಕಾರ್ಮಿಕರುಗಳಿಗೆ ಏಕಾ ಏಕಿ ಸಿನಿಮಾ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ಸೋಮವಾರದಿಂದ ತೆಲುಗಿನ ಎಲ್ಲ ಸಿನಿಮಾ, ವೆಬ್ ಸಿರೀಸ್‌ಗಳ ಚಿತ್ರೀಕರಣಗಳು ಬಂದ್ ಆಗಿವೆ. ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್, ತೆಲುಗು ಸಿನಿಮಾ ಕಾರ್ಮಿಕರ ದಿನಗೂಲಿ ಮೊತ್ತ ಹೆಚ್ಚಿಸುವಂತೆ ನಿರ್ಮಾಪಕರ ಸಂಘದೊಂದಿಗೆ ಕೆಲ ತಿಂಗಳುಗಳಿಂದಲೂ ಸಭೆ ನಡೆಸುತ್ತಲೇ ಇತ್ತು.
ಸಿನಿಮಾ ನಾಯಕರ ಸಂಭಾವನೆ ಹೆಚ್ಚಾಗಿದೆ. ನಟ-ನಟಿಯರ ಸಂಭಾವನೆ ಹೆಚ್ಚಾಗಿದೆ. ಒಟಿಟಿ ಇನ್ನಿತರೆ ಕಾರಣಕ್ಕೆ ಸಿನಿಮಾ ನಿರ್ಮಾಪಕರಿಗೆ ಬರುವ ಲಾಭ ಹತ್ತು ಪಟ್ಟಾಗಿದೆ. ಆದರೆ ಸಿನಿಮಾ ಕಾರ್ಮಿಕರ ದಿನಗೂಲಿ ವರ್ಷಗಳಿಂದಲೂ ಏರಿಕೆ ಆಗಿಲ್ಲ. ಹಾಗಾಗಿ ಕಾರ್ಮಿಕರ ದಿನಗೂಲಿಯನ್ನು 30% ಹೆಚ್ಚಳ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಇದಕ್ಕೆ ನಿರ್ಮಾಪಕ ಸಂಘ ಒಪ್ಪಿಲ್ಲ. ಇದೇ ಕಾರಣಕ್ಕೆ ಹೈದರಾಬಾದ್ನಲ್ಲಿ ಸಭೆ ನಡೆಸಿದ ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ ಮುಖಂಡರು, ಸೋಮವಾರದಿಂದಲೇ ಸಿನಿಮಾಗಳ ಚಿತ್ರೀಕರಣ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಆದರೆ ಯಾವ ನಿರ್ಮಾಣ ಸಂಸ್ಥೆ ಹೊಸ ದಿನಗೂಲಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚುವರಿ ಕೂಲಿ ನೀಡುತ್ತಿದೆಯೋ ಆ ಸಿನಿಮಾಗಳ ಕೆಲಸಗಳು ಮಾತ್ರವೇ ಮುಂದುವರಿದಿವೆ.
ಹಳೆ ದಿನಗೂಲಿ ವ್ಯವಸ್ಥೆ ಹೊಂದಿರುವ ಸಿನಿಮಾಗಳ ಚಿತ್ರೀಕರಣಗಳು ಬಂದ್ ಆಗಿವೆ. ಹಬ್ಬಗಳ ಸಮಯ ಹತ್ತಿರವಿದ್ದು ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿ ಲಘು-ಬಗೆಯಲ್ಲಿ ಚಿತ್ರೀಕರಣ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರ ಈ ಪ್ರತಿಭಟನೆ ಸಿನಿಮಾ ತಂಡಗಳಿಗೆ ಭಾರೀ ಹೊಡೆತ ನೀಡಲಿದೆ. ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ರಾಜಮೌಳಿ-ಮಹೇಶ್ ಬಾಬು ಸಿನಿಮಾ, ಪ್ರಭಾಸ್ ನಟನೆಯ ಎರಡು ಸಿನಿಮಾ, ಚಿರಂಜೀವಿ ನಟನೆಯ ಎರಡು ಸಿನಿಮಾ, ಜೂ ಎನ್ಟಿಆರ್ ನಟನೆಯ ಪ್ರಶಾಂತ್ ನೀಲ್ ಜತೆಗಿನ ಸಿನಿಮಾ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಹೀಗೆ ಹಲವು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಈಗ ಈ ಎಲ್ಲ ಸಿನಿಮಾಗಳ ಚಿತ್ರೀಕರಣ ಬಂದ್ ಆಗಿದೆ. ಮತ್ತೊಂದು ವಿವಾದ ಸೃಷ್ಟಿಸಿದ ಕಮಲ್ ಹಾಸನ್: ಶಿಕ್ಷಣದ ಬಗ್ಗೆ ನಟ ಹೇಳಿದ್ದೇನು?