ಚಿತ್ರದುರ್ಗ : ಇದೆ ತಿಂಗಳ 10 ರಂದು ಟಿಬೇಟಿಯನ್ ಧರ್ಮ ಗುರು ದಲೈಲಾಮರವರ 90 ನೇ ಹುಟ್ಟುಹಬ್ಬವನ್ನು ಆಚರಿಸಲಾಗುವುದೆಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಥ್ಯಾಂಕ್ಯು ಇಂಡಿಯಾ, ಥ್ಯಾಂಕ್ಯು ಕರ್ನಾಟಕ ಕೃತಜ್ಞತೆ ಸಲ್ಲಿಸುವುದಕ್ಕಾಗಿ ದಲೈಲಾಮರವರ ಹುಟ್ಟುಹಬ್ಬವನ್ನು ನಮ್ಮ ಮಠದಲ್ಲಿ ಆಚರಿಸಲು ಬೌದ್ದ ಭಿಕ್ಕುಗಳು ಇಷ್ಟಪಟ್ಟಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಪಥಸಂಚಲನ ಹೊರಡಲಿರುವ ಬೌಧ್ದ ಭಿಕ್ಕುಗಳು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಜಾವೀರ ಮದಕರಿನಾಯಕ ಹಾಗೂ ಕನಕದಾಸರ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಲಿದ್ದಾರೆಂದು ತಿಳಿಸಿದರು.
ಸಚಿವರುಗಳಾದ ಸಂತೋಷ್ಲಾಡ್, ಕೆ.ಹೆಚ್.ಮುನಿಯಪ್ಪ, ಸಂಸದ ಗೋವಿಂದ ಕಾರಜೋಳ, ಮುಂಡಗೋಡಿನಿಂದ ರಿಂಚಿಮ್ ವಾಗ್ನೆ ಇವರುಗಳು ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದು, ಅಂದು ಮಧ್ಯಾಹ್ನ ಮೂರು ಗಂಟೆಗೆ ಸೀಬಾರ ಸಮೀಪವಿರುವ ಎಸ್.ನಿಜಲಿಂಗಪ್ಪನವರ ಸಮಾಧಿ ಬಳಿ ಧ್ಯಾನ ಪೂಜೆ ನೆರವೇರಲಿದೆ ಎಂದರು.
ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಮಾತನಾಡಿ ಚಿತ್ರದುರ್ಗಕ್ಕೂ ದಲೈಲಾಮರವರಿಗೂ ಅವಿನಾಭಾವ ಸಂಬಂಧವಿರುವುದರಿಂದ ಅವರ ಹುಟ್ಟುಹಬವನ್ನು ಇಲ್ಲಿ ಆಚರಿಸಲು ಅವರೆ ಇಚ್ಚೆ ವ್ಯಕ್ತಪಡಿಸಿದ್ದಾರೆ. ಜವಾಹರಲಾಲ್ ನೆಹರುರವರು ದೇಶದ ಪ್ರಧಾನಿಯಾಗಿದ್ದಾಗ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಿಗೆ ರಾಜ್ಯದಲ್ಲಿ ದಲೈಲಾಮರವರಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದರು. ಒಂದು ಲಕ್ಷ ನಲವತ್ತು ಸಾವಿರ ಸಂಸಾರಗಳು ದೇಶದಲ್ಲಿವೆ. ದಲೈಲಾಮರವರ ಜೊತೆ ಅಂದು ಎಂಬತ್ತು ಸಾವಿರ ಭಿಕ್ಕುಗಳು ನಮ್ಮ ದೇಶಕ್ಕೆ ಬಂದಿದ್ದರೆಂದರು.
ಆ.10 ರಂದು ಐದುನೂರು ಬೌದ್ದ ಭಿಕ್ಕುಗಳು ದುರ್ಗಕ್ಕೆ ಬರುತ್ತಾರೆ. ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಸಚಿವ ಎಂ.ಬಿ.ಪಾಟೀಲ್ ಕಾರ್ಯಕ್ರಮ ಉದ್ಗಾಟಿಸುವರು ಎಂದು ಹೇಳಿದರು.
ಬಸವಕುಮಾರ ಸ್ವಾಮೀಜಿ ಮಾತನಾಡುತ್ತ ಇಂತಹ ಕಾರ್ಯಕ್ರಮಗಳಿಗೆ ಮುರುಘಾಮಠದ ಸಂಪೂರ್ಣ ಸಹಕಾರವಿದೆ. ಬಸವ ಸಮಾನತೆ, ಬುದ್ದ ಶಾಂತಿಯ ಸಂಕೇತ ಹಾಗಾಗಿ ಬಸವ ನಾಡಿನಲ್ಲಿ ಬುದ್ದನ ಸ್ಮರಣೆ ಆಚರಿಸಲಾಗುವುದು. ದಲೈಲಾಮ ಕರ್ನಾಟಕದ ಮೇಲೆ ಅಪಾರವಾದ ಗೌರವವಿಟ್ಟುಕೊಂಡಿದ್ದಾರೆ. ಭಾರತಕ್ಕೆ ಟಿಬೆಟಿಯನ್ನರು ಕೃತಜ್ಞತೆ ಸಲ್ಲಿಸುವ ಆಸೆಯಿಂದ ಅವರ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಲು ತೀರ್ಮಾನಿಸಿದ್ದಾರೆಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಹೊಳಲ್ಕೆರೆಯ ಪಾಂಡುರಂಗಸ್ವಾಮಿ, ಕೆ.ಇ.ಬಿ.ಷಣ್ಮುಖಪ್ಪ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಹೆಚ್.ಜೆ.ಕೃಷ್ಣಮೂರ್ತಿ ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.