ಶರ್ಟಿನ ಮೇಲ್ಬಾಗದ ಬಟನ್ ಸರಿಯಾಗಿ ಹಾಕಿಲ್ಲ ಎಂದು ಆರೋಪಿಸಿ ಪ್ಲಸ್ ವನ್ ವಿದ್ಯಾರ್ಥಿ ಮೇಲೆ ಪ್ಲಸ್ ಟು ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ ಆರೋಪದ ಮೇಲೆ 10 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಕಾಂಞಂಗಾಡ್‌ನ ಬಲ್ಲಾ ಕಡಪ್ಪುರಂ ನಿವಾಸಿ ಮಡಿಕೈ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ತರಗತಿಯ ವಿಜ್ಞಾನ ವಿದ್ಯಾರ್ಥಿ ಮುಹಮ್ಮದ್ ಶನೀದ್ (16) ಹಲ್ಲೆಗೊಳಗಾದ ವಿದ್ಯಾರ್ಥಿ
ಪ್ಲಸ್ ಟು ವಿದ್ಯಾರ್ಥಿಗಳ ತಂಡ ಕುತ್ತಿಗೆಗೆ ತುಳಿದ ಕಾರಣ ಪ್ಲಸ್ ಒನ್ ವಿದ್ಯಾರ್ಥಿ ಸುಮಾರು 6 ಗಂಟೆಗಳ ಕಾಲ ಪ್ರಜ್ಞೆ ತಪ್ಪಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ 10 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಕಾಂಞಂಗಾಡಿನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 5 ರಂದು ಮುಹಮ್ಮದ್ ಶನೀದ್ ತನ್ನ ಸ್ನೇಹಿತನ ಜತೆ ಶೌಚಾಲಯದ ಬಳಿ ನಿಂತಿದ್ದಾಗ ಶರ್ಟ್‌ನ ಕಾಲರ್ ಬಟನ್ ಸರಿಯಾಗಿ ಹಾಕಿಲ್ಲ ಎಂದು ಆರೋಪಿಸಿ ಸುಮಾರು 10 ರಿಂದ 15 ಮಂದಿ ಪ್ಲಸ್ ಟು ವಿದ್ಯಾರ್ಥಿಗಳು ಹಲ್ಲೆ ಮಾಡಿ ದೂಡಿ ಹಾಕಿ ಆತನ ಎದೆ, ಸೊಂಟ, ಕಾಲುಗಳು ಮತ್ತು ಕುತ್ತಿಗೆಗೆ ತುಳಿದಿದ್ದಾರೆ. ಇದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅತನನ್ನು ಓರ್ವ ಶಿಕ್ಷಕ ಸ್ಟಾಫ್ ರೂಮಿಗೆ ಕರೆದೊಯ್ದು, ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ಆತನ ಕುಟುಂಬದವರಿಗೆ ಮಾಹಿತಿ ನೀಡಲಾಯಿತು. ಸುಮಾರು ಆರು ಗಂಟೆಗಳ ಬಳಿಕ ರಾತ್ರಿ 9.30 ಕ್ಕೆ ವೇಳೆಗೆ ಅವರಿಗೆ ಪ್ರಜ್ಞೆ ಮರಳಿತ್ತು. ಘಟನೆಯ ಬಗ್ಗೆ ರ‍್ಯಾಗಿಂಗ್ ವಿರೋಧಿ ಸಮಿತಿ ಸಭೆ ಸೇರಿ ಚರ್ಚಿಸಿದೆ. ಸಂತ್ರಸ್ತ ವಿದ್ಯಾರ್ಥಿ ಶನೀದ್ ಪ್ರಾಂಶುಪಾಲರಿಗೆ ಘಟನೆಯ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಾನೆ.